Menu

ಶಿಲಾಯುಗಕ್ಕೆ ಇರಾನ್‌ ಎಂದ ಟ್ರಂಪ್‌: ಆಕ್ರಮಣಕಾರರ ಪಾಲಿಗೆ ಇರಾನ್‌ ಮಸಣವೆಂದ ಆರ್ಮಿ ಚೀಫ್‌

ಇರಾನ್ ಅನ್ನು ಮರಳಿ ನಾವು ‘ಶಿಲಾಯುಗ’ಕ್ಕೆ ತಳ್ಳುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ ನೀಡಿರುವ ಹೇಳಿಕೆಗೆ ಇರಾನ್‌ ಸೇನಾ ಮುಖ್ಯಸ್ಥ ಅಲಿ ಜಹಾನ್‌ಶಾಹಿ ಅಮೆರಿಕಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರಂಪ್‌ ನೀಡಿದ ಈ ಹೇಳಿಕೆ ಬಗ್ಗೆ ಚೀನಾ ಕೂಡ ವಿರೋಧ ವ್ಯಕ್ತಪಡಿಸಿದೆ. ಟ್ರಂಪ್‌ ನಡೆಗೆ ಈಗಾಗಲೇ ಯುರೋಪ್‌ನ ಅನೇಕ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.

ಇರಾನ್ ಸೇನಾ ಕಮಾಂಡರ್ ಅಲಿ ಜಹಾನ್‌ಶಾಹಿ, ಅಮೆರಿಕದ ಪಡೆಗಳನ್ನು ಶಿಲಾಯುಗಕ್ಕಲ್ಲ, ಅದಕ್ಕೂ ಹಿಂದಿನ ಕಾಲಕ್ಕೆ ಕಳುಹಿಸಲಾಗುವುದು. ಇರಾನ್ ಮಣ್ಣು ಆಕ್ರಮಣಕಾರರ ಪಾಲಿಗೆ ಸ್ಮಶಾನ ಎಂದು ಗುಡುಗಿದ್ದಾಗಿ ಮಾಧ್ಯಮ ವರದಿ ಮಾಡಿದೆ.

ಯಾವುದೇ ಸಂಘರ್ಷ ಎದುರಿಸಲು ಇರಾನ್‌ನ ವಿಶೇಷ ಪಡೆಗಳು ಸಂಪೂರ್ಣ ಸಿದ್ಧತೆಯಲ್ಲಿವೆ ಎಂದು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಸುಳಿವು ನೀಡಿರುವ ಯೆಮೆನ್‌ನ ಇರಾನ್ ಬೆಂಬಲಿತ ‘ಹೌತಿ’ ಬಂಡುಕೋರರು, ಇಸ್ರೇಲ್‌ನ ಜಾಫಾ ಪ್ರದೇಶವನ್ನು ಗುರಿಯಾಗಿಸಿಕೊಂಡು ಜಂಟಿ ಸೇನಾ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿದ್ದಾರೆ.

ಇಸ್ರೇಲ್‌ನ ಪ್ರಮುಖ ನೆಲೆಗಳ ಮೇಲೆ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ ಎಂದು ಹೌತಿ ಸೇನಾ ವಕ್ತಾರ ಯಹ್ಯಾ ಸಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇರಾನ್ ಬೆಂಬಲಿತ ಗುಂಪುಗಳು ಮತ್ತು ಹಿಜ್ಬುಲ್ಲಾ ಸೇರಿದಂತೆ ಈ ವಲಯದ ಮಿತ್ರಪಡೆಗಳೊಂದಿಗೆ ಸಮನ್ವಯ ಸಾಧಿಸಿ ಈ ದಾಳಿ ನಡೆಸಲಾಗಿದ್ದು, ನಿಗದಿತ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ತಡೆ ಹಿಡಿಯಲಾದ ದಾಳಿಯೊಂದರ ಅವಶೇಷಗಳು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಅಬುಧಾಬಿಯ ಅನಿಲ ಸಂಸ್ಕರಣಾ ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿದೆ.

Related Posts

Leave a Reply

Your email address will not be published. Required fields are marked *