ಮೈಸೂರು: ಇಬ್ಬರು ರೈತರ ಮೇಲೆ ದಾಳಿ ಮಾಡಲು ಯತ್ನಿಸಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮೈಸೂರಿನಲ್ಲಿ ತಡರಾತ್ರಿ ನಡೆಸಿದ ಕಾರ್ಯಾಚರಣೆ ವೇಳೆ ಬಂಧಿಸಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿ ಗುರುಪುರ ಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಪ್ರದೇಶದಲ್ಲಿರುವ ಗೌಡನಕಟ್ಟೆ ಗ್ರಾಮದ ಜಮೀನಿನಲ್ಲಿ ಗುರುವಾರ ತಡರಾತ್ರಿ ಹುಲಿ ಸೆರೆ ಹಿಡಿಯಲಾಗಿದೆ.
ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರಿಂದ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯು, ತಡರಾತ್ರಿ ತಾಯಿ ಹುಲಿ ಸೆರೆ ಹಿಡಿದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮರಿ ಹುಲಿಗಳಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಗ್ರಾಮದ ಹೊರವಲಯದ ಹೊಲದ ಮಧ್ಯದಲ್ಲಿ ಅಡಗಿ ಕುಳಿತಿದ್ದ ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲು ಅರಣ್ಯ ಇಲಾಖೆ ಚಿಂತಿಸಿದೆ. ಮರಿ ಹುಲಿಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಲ್ಕು ಆನೆಗಳೊಂದಿಗೆ ಅರಣ್ಯ ಇಲಾಖೆಯ ಟಾಸ್ಕ್ ಪೋರ್ಸ್ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರೆಸಿದೆ.
ಇಬ್ಬರ ಮೇಲೆ ದಾಳಿಗೆ ಯತ್ನಿಸಿದ ಹುಲಿ
ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರ ಮೇಲೆ ಹುಲಿ ದಾಳಿಗೆ ಯತ್ನಿಸಿತ್ತು. ಗೌಡನಕಟ್ಟೆಯ ರೈತ ಪ್ರಕಾಶ್ ಹಾಗೂ ಸ್ವಾಮಿ ಹುಲಿಯಿಂದ ಪಾರಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳಿಗೆ ರೈತರು ಹುಲಿ ಹಿಡಿಯಲೇಬೇಕೆಂದು ಒತ್ತಾಯಿಸಿ ಮುತ್ತಿಗೆ ಹಾಕಿದ್ದರು. ಅಲ್ಲದೇ ಗ್ರಾಮಸ್ಥರು ಸ್ಥಳದಲ್ಲೇ ಬೀಡು ಬಿಟ್ಟಿದ್ದರು.
ಪ್ರಕಾಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಗೆ ಗುರುವಾರ ಬೆಳಗ್ಗೆ ಸ್ನೇಹಿತ ಸ್ವಾಮಿಯವರೊಂದಿಗೆ ರಸಗೊಬ್ಬರ ಹಾಕುತ್ತಿದ್ದರು. ಈ ವೇಳೆ ಹುಲಿಯು ಜೋಳದ ಹೊಲದಿಂದ ಹೊರ ಬಂದಿದ್ದು, ರೈತರಿಬ್ಬರೂ ಜೋರಾಗಿ ಕಿರುಚಿಕೊಂಡಿದ್ದರು. ಅಕ್ಕಪಕ್ಕದಲ್ಲಿದ್ದ ರೈತರು ಸಹ ಜೋರಾಗಿ ಕೂಗಿದ್ದರಿಂದ ಹುಲಿ ಹೆದರಿ ಓಡಿ ಹೋಗಿತ್ತು. ರೈತರಿಬ್ಬರು ಬಚಾವಾಗಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪರಿಶೀಲನೆ ವೇಳೆ ಹುಲಿ ದಾಳಿ ನಡೆಸಲು ಮುಂದಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮ್ಮದ್ ಫಯಾಜುದ್ದೀನ್, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಹರ್ಷಕುಮಾರ್, ಆರ್ಎಫ್ಒ ನಂದಕುಮಾರ್ ಮತ್ತವರ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದರು.


