Menu

ರಾಷ್ಟ್ರಪತಿ ಅಗ್ಗದ ಪ್ರಚಾರ ವಸ್ತುವಲ್ಲ

ರಾಜ್ಯಪಾಲ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಎಳೆದು ತಂದು ಮತಗಳನ್ನು ಬಾಚಬೇಕೆಂಬ ಹಿಡನ್ ಅಜೆಂಡಾ ಯಾವ ರಾಜಕೀಯ ಪಕ್ಷಕ್ಕೂ ಶೋಭಿತವಲ್ಲ. ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಜಾತಿ, ಧರ್ಮ ಮತ್ತು ವಿವಿಧ ಆಮಿಷಗಳನ್ನು ಒಡ್ಡುವ ಭಾಷಣ ಮತ್ತು ಪ್ರಚಾರಗಳ ಮೇಲೆ ಚುನಾವಣೆ ಆಯೋಗವು ಸಂಪೂರ್ಣ ನಿಗಾವಹಿಸಿ ಅವುಗಳನ್ನು ನಿಯಂತ್ರಿಸುವ ಗುರುತರ ಹೊಣೆಗಾರಿಕೆ ಆಯೋಗದ್ದು.

ಪಂಚ ರಾಜ್ಯಗಳ ಚುನಾವಣೆ ಸಮೀಪಿಸಿದಂತೆ ಸಾರ್ವತ್ರಿಕ ವಲಯದಲ್ಲಿ ವಿವಾದಗಳೂ ಗರಿಗೆದರಿವೆ. ಮುಕ್ತ ಹಾಗೂ ಪಾರದರ್ಶಕ ಪ್ರಜಾತಂತ್ರದಲ್ಲಿ ಈ ವಿದ್ಯಮಾನಗಳು ಸರ್ವದಾ ಅನಪೇಕ್ಷಿತ. ಚುನಾವಣೆ ಆಯೋಗವು ಈ ದಿಶೆಯಲ್ಲಿ ಎಚ್ಚರ ವಹಿಸುವುದು ಲೇಸು. ಐದು ರಾಜ್ಯಗಳ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಮುನ್ನವೇ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕೆಲವೊಂದು ಪ್ರಸಂಗಗಳು ಸಂಭವಿಸಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಡಾವಳಿಯೂ ಪ್ರಶ್ನಾರ್ಹ. ಇನ್ನೇನು ಚುನಾವಣೆ ಸಮೀಪಿಸಿದೆ ಎನ್ನುವ ವೇಳೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಚಂದ್ರ ಬೋಸ್ ರಾಜೀನಾಮೆ ನೀಡಿದರು ! ಈ ಹೊಣೆಗಾರಿಕೆಯನ್ನು ತಮಿಳುನಾಡು ರಾಜ್ಯಪಾಲ ರವಿ ಅವರಿಗೆ ವಹಿಸಲಾಗಿದೆ ! ಈ ಎರಡೂ ವಿದ್ಯಮಾನಗಳು ಒಂದರ ಮೇಲೆ ಒಂದರಂತೆ ಜರುಗಿರುವುದು ಗಮನಾರ್ಹ.

ಬೋಸ್ ಹಠಾತ್ ರಾಜೀನಾಮೆ ಮತ್ತು ಈ ಜಾಗಕ್ಕೆ ತಮಿಳುನಾಡು ರಾಜ್ಯಪಾಲರ ನಿಯೋಜನೆ – ಇವೆರೆಡೂ ಘಟನೆಗಳನ್ನು ಸೂಕ್ಷ್ಮವಾಗಿ ನೋಡಿದಾಗ, ಕೇಂದ್ರ ಸರ್ಕಾರದ ಅಂತರಾಳ ಏನೆಂಬುದು ಸ್ಪಷ್ಟ. ಚುನಾವಣೆಗಳಲ್ಲಿ ಅಧಿಕಾರ ಯಂತ್ರಾಂಗ ಮತ್ತು ಕಾರ್ಯಾಂಗದ ದುರ್ಬಳಸಿಕೊಂಡು ಮೆಜಾರಿಟಿ ಗಳಿಸಬೇಕೆಂಬ ಪ್ರವೃತ್ತಿಯೇ ದಮನಕಾರಿ. ಇದು ಮತ ನೀಡುವ ಜನತೆಗೆ ಗೊತ್ತಿಲ್ಲದ ವಿಚಾರವಲ್ಲ. ತಮ್ಮ ಸರ್ಕಾರದ ಸಾಧನೆ ಮತ್ತು ಜಾರಿಗೊಳಿಸಿದ ಸಾರ್ಥಕ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸ ದೇಶದ ಪ್ರಮುಖ ರಾಜಕೀಯ ಪಕ್ಷಗಳಿಗೆ ಇಲ್ಲದಿರುವುದು ಒಂದು ದುರಂತ. ರಾಜ್ಯಪಾಲ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಎಳೆದು ತಂದು ಮತಗಳನ್ನು ಬಾಚಬೇಕೆಂಬ ಹಿಡನ್ ಅಜೆಂಡಾ ಯಾವ ರಾಜಕೀಯ ಪಕ್ಷಕ್ಕೂ ಶೋಭಿತವಲ್ಲ.

ಜಾತಿ, ಧರ್ಮ ಮತ್ತು ವಿವಿಧ ಆಮಿಷಗಳನ್ನು ಒಡ್ಡುವ ಭಾಷಣ ಮತ್ತು ಪ್ರಚಾರಗಳ ಮೇಲೆ ಚುನಾವಣೆ ಆಯೋಗವು ಸಂಪೂರ್ಣ ನಿಗಾವಹಿಸಿ ಅವುಗಳನ್ನು ನಿಯಂತ್ರಿಸುವ ಗುರುತರ ಹೊಣೆಗಾರಿಕೆ ಆಯೋಗದ್ದು. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳೂ ಈ ದೇಶದ ಚುನಾವಣೆಗಳ ವಿಷಯವಾಗಿ ಚರ್ಚೆಯಾಗುವುದು ಸರಿಯೇ ? ಈ ದಿಶೆಯಲ್ಲಿ ಕೇಂದ್ರದ ಏಕಪಕ್ಷೀಯ ಧೋರಣೆ ಖಂಡನೀಯ. ಒಂದು ವೇಳೆ ಈ ದೇಶದ ನ್ಯಾಯಾಂಗದ ವಿಚಾರದಲ್ಲಿ ಕೇಂದ್ರಕ್ಕೇನಾದರೂ ಹಿಡಿತ ಇದ್ದಿದ್ದರೆ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೂ ತಮಗಿಷ್ಟ ಬಂದಂತೆ ವರ್ಗಾಯಿಸುತ್ತಿತ್ತೇನೋ!

ರಾಷ್ಟ್ರಪತಿ ಭೇಟಿ ಸಂದರ್ಭದಲ್ಲಿ ರಾಜ್ಯವೊಂದರಲ್ಲಿ ಶಿಷ್ಟಾಚಾರವು ಉಲ್ಲಂಘನೆ ಆಗಿದೆ ಎಂಬ ವಿಚಾರ ಪ್ರಧಾನಿ ಬಾಯಲ್ಲಿ ಆರೋಪದ ರೂಪದಲ್ಲಿ ಹೊರ ಬೀಳುವುದೆಂದರೆ ಇದೆಷ್ಟು ಅಗ್ಗದ ರಾಜಕೀಯ ಎಂದೆನಿಸುತ್ತದೆ. ರಾಷ್ಟ್ರಪತಿ ಭೇಟಿ ಮತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ರಾಜ್ಜದ ಮುಖ್ಯ ಕಾರ್ಯದರ್ಶಿಗಳು ಉತ್ತರಿಸಬೇಕಾಗುವುದು. ಈ ವಿಚಾರದಲ್ಲಿ ಕೇಂದ್ರವು ರಾಜ್ಯ ಸರ್ಕಾರದಿಂದ ವಿವರಣೆ ಪಡೆಯಬಹುದು. ಇವೆಲ್ಲವೂ ಆಡಳಿತದ ಕಾರ್ಯಾಂಗದ ಮಟ್ಟದಲ್ಲಿ ನಿಯಮಾವಳಿ ಪ್ರಕಾರ ನಡೆಯುವಂತಹ ಪ್ರಕ್ರಿಯೆ ವಿನಹ ಪರಸ್ಪರ ಕೆಸರೆರಚಾಡಿಕೊಳ್ಳಲೆಂದು ಬೀದಿಯಲ್ಲಿ ನಿಂತು ಮಾತನಾಡುವ ಷಯಗಳೇ ಅಲ್ಲ. ಲೋಕಭವನ ಮತ್ತು ರಾಷ್ಡ್ರಪತಿಭವನ ಇಂದು ಅಗ್ಗದ ರಾಜಕೀಯದ ವಸ್ತುಗಳಾಗಿ ಬಳಕೆಯಾಗದಿರಲಿ.

Related Posts

Leave a Reply

Your email address will not be published. Required fields are marked *