ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆತಿದೆ.
ವಿಧಾನಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ ʼಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ʼ ಅನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ವಿಧೇಯಕದ ಉದ್ದೇಶವನ್ನು ವಿವರಿಸಿದರು.
ನಂತರ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ, ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ವಿರೋಧ ಪಕ್ಷಗಳ ಸದಸ್ಯರು ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅಂದು ಕೆಂಪೇಗೌಡರು ಬೆಂಗಳೂರಿಗೆ ಹೇಗೆ ಅಡಿಪಾಯ ಹಾಕಿದರೋ ಅದೇ ರೀತಿ ನಾವು ಕೂಡ ಕಾಲಮಾನಕ್ಕೆ ತಕ್ಕಂತೆ ಸುಭದ್ರ ಅಡಿಪಾಯ ಹಾಕಲು ಮುಂದಾಗಿದ್ದೇವೆ ಎಂದರು.
“ಬೆಂಗಳೂರನ್ನು ನಾವು ಛಿದ್ರಗೊಳಿಸುತ್ತಿಲ್ಲ, ಗಟ್ಟಿಗೊಳಿಸಲು ಮುಂದಾಗಿದ್ದೇವೆ. ಉತ್ತರಾಖಂಡ, ಜಾರ್ಖಂಡ್, ತೆಲಂಗಾಣಾದಲ್ಲಿ ಇಂತಹ ಪ್ರಯತ್ನ ಮಾಡಿದ್ದಾರೆ. ಮೈಸೂರು ಜಿಲ್ಲೆ ನಂತರ ಚಾಮರಾಜನಗರವಾಗಿ ವಿಭಜನೆಯಾಯಿತು. ಬೆಂಗಳೂರು ಜಿಲ್ಲೆ ನಗರ, ಗ್ರಾಮಾಂತರ ಹಾಗೂ ರಾಮನಗರವಾಗಿ ಮೂರು ಜಿಲ್ಲೆಯಾದವು. ಗದಗ ಜಿಲ್ಲೆ ಹಾವೇರಿಯಾಗಿ ವಿಭಜನೆಯಾಯಿತು. ಇದೆಲ್ಲವು ಆಗಿದ್ದು ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಹಾಗೂ ಆಡಳಿತಾತ್ಮಕ ಉದ್ದೇಶದಿಂದ. ಹೀಗಾಗಿ ಇಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಅಧಿಕಾರ ವಿಕೇಂದ್ರೀಕರಣ, ಆರ್ಥಿಕ ಸ್ವಾಯತ್ತತೆ, ತೆರಿಗೆ ಸಂಗ್ರಹ ಉದ್ದೇಶದಿಂದ ಈ ವಿಧೇಯಕ ಮಾಡಲು ಹೊರಟಿದ್ದೇವೆ. ಜಿಬಿಎ ಇದ್ದರೆ ಒಂದು ಪಾಲಿಕೆಯಲ್ಲಿ ತೆರಿಗೆ ಪ್ರಮಾಣ ಹೆಚ್ಚಳ, ಮತ್ತೊಂದು ಪಾಲಿಕೆಯಲ್ಲಿ ತೆರಿಗೆ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ” ಎಂದು ತಿಳಿಸಿದರು.
“ವಿರೋಧ ಪಕ್ಷದ ನಾಯಕರಾದ ನಾರಾಯಣ ಸ್ವಾಮಿ ಅವರು ಪ್ಲಾನಿಂಗ್ ವಿಚಾರವನ್ನು ಪ್ರಸ್ತಾಪಿಸಿದರು. ನಾವು ಈಗ ನಂಬಿಕೆ ನಕ್ಷೆ ಎಂಬ ಯೋಜನೆ ರೂಪಿಸಿದ್ದೇವೆ. 50X80 ನಿವೇಷನದವರೆಗೂ ಕಟ್ಟಡ ಪ್ಲಾನಿಂಗ್ ಅನುಮತಿ ಪಡೆಲು ಯಾರು ಪಾಲಿಕೆ ಕಚೇರಿ ಅಲೆಯುವಂತಿಲ್ಲ. ಅಧಿಕೃತ ಇಂಜಿನಿಯರ್ ಗಳಿಂದಲೇ ಪ್ಲಾನಿಂಗ್ ಅನುಮತಿ ನೀಡುವ ಅವಕಾಶ ಕಲ್ಪಿಸಲಾಗಿದೆ. ನಾವು ಈ ಮಸೂದೆಯಲ್ಲಿ 74ನೇ ತಿದ್ದುಪಡಿಗೆ ಯಾವುದೇ ತೊಂದರೆ ಮಾಡಿಲ್ಲ. ಒಂದು ವೇಳೆ ಹೆಚ್ಚು ಕಮ್ಮಿ ಮಾಡಿದರೆ ಯಾರಾದರೂ ನ್ಯಾಯಾಲಯದಲ್ಲಿ ಅರ್ಜಿಹಾಕಿ ತಕರಾರು ಮಾಡುತ್ತಾರೆ ಎಂಬ ಅರಿವು ನನಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಎಲ್ಲಾ ಭಾಗಗಳಿಂದ ಆದಾಯ ಸಂಗ್ರಹಿಸಿ ನಂತರ ಎಲ್ಲಾ ಪಾಲಿಕೆಗೆಳಿಗೆ ಹಂಚುವ ಆಲೋಚನೆಯನ್ನು ನಾವು ಮಾಡಿದೆವು. ಆದರೆ, 74ನೇ ತಿದ್ದುಪಡಿ ಪ್ರಕಾರ ಒಂದು ಸ್ಥಳೀಯ ಸಂಸ್ಥೆಗಳ ಆದಾಯವನ್ನು ಮತ್ತೊಂದು ಸಂಸ್ಥೆಗೆ ವರ್ಗಾವಹಿಸುವಂತಿಲ್ಲ. ಹೀಗಾಗಿ ಇದು ಅಸಾಧ್ಯ. ಹೀಗಾಗಿ ಕಡಿಮೆ ಆದಾಯವಿರುವ ಪಾಲಿಕೆಗಳಿಗೆ ಸರ್ಕಾರದಿಂದ ನೆರವು ಒದಗಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದು ವಿವರಿಸಿದರು.
“ಸಿ.ಟಿ ರವಿ ಅವರು ಬಿಡಿಎ, ಬಿಎಂಆರ್ ಡಿಎ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಿದರು. ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ನಿಗದಿಪಡಿಸಿರುವ ವ್ಯಾಪ್ತಿಯಷ್ಟು ಯೋಜನಾ ಪ್ರಾಧಿಕಾರದ ಅಧಿಕಾರವಿದೆ. ಸದಸ್ಯರಾದ ಗೋಪಿನಾಥ್ ಅವರು ಸಲಹೆ ನೀಡಿದಂತೆ ಎಲ್ಲಾ ಪಕ್ಷದ ಶಾಸಕರ ಜತೆ ಚರ್ಚೆ ಮಾಡಿ ರೂಪುರೇಷೆ ತೀರ್ಮಾನ ಮಾಡಬೇಕು ಎಂದಿದ್ದು, ಅದರಂತೆ ಎಲ್ಲರ ಅಭಿಪ್ರಾಯ ಪಡೆದೇ ಇದನ್ನು ರೂಪಿಸುತ್ತೇವೆ. ಈ ಮಸೂದೆಯಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಅವರು ಸಭೆ ಮಾಡಬೇಕು ಎಂದು ಹೇಳಲಾಗಿದೆ. ಕಾರಣ, ವಿವಿಧ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮೇಲ್ಸೇತುವೆ, ಟನಲ್ ರಸ್ತೆ ಸೇರಿದಂತೆ ಕೆಲವು ಪ್ರಮುಖ ಯೋಜನೆಗಳ ವಿಚಾರ ಬಂದಾಗ ನಿರ್ದಿಷ್ಟ ಪಾಲಿಕೆಯಿಂದ ಅನುದಾನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ಕಾರದ ನೆರವು ಪಡೆಯಲು ಮುಖ್ಯಮಂತ್ರಿಗಳ ಸಹಕಾರ ಬೇಕಾಗುತ್ತದೆ” ಎಂದು ಸ್ಪಷ್ಟನೆ ನೀಡಿದರು. “ಜಿಬಿಎ ವೇತನವನ್ನು ಸರ್ಕಾರ ನೀಡಲಿದ್ದು, ಸ್ಥಳೀಯ ಪಾಲಿಕೆ ವೇತನವನ್ನು ಆಯಾ ಪಾಲಿಕೆಗಳೇ ನೀಡಲಿವೆ” ಎಂದು ತಿಳಿಸಿದರು.
“ಸದಸ್ಯರಾದ ಗೋಪಿನಾಥ್ ಹಾಗೂ ನವೀನ್ ಅವರು ಕೊಟ್ಟ ಪ್ರಮುಖ ಸಲಹೆಗಳನ್ನು ಪರಿಗಣಿಸಿದ್ದೇವೆ. ನಾಗರಾಜ್ ಯಾದವ್ ಅವರು ಸಾರ್ವಜನಿಕ ಸಾರಿಗೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಅದರ ಬಗ್ಗೆಯೂ ಗಮನ ಹರಿಸುತ್ತೇವೆ. ರವಿಕುಮಾರ್ ಅವರು ಕೆಲವು ಆತಂಕ ವ್ಯಕ್ತಪಡಿಸಿದ್ದಾರೆ. ನೀವು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ನಾವು ಛಿದ್ರ ಮಾಡುವುದಿಲ್ಲ. ಚುನಾಯಿತ ಸಮಿತಿಗೆ ಯಾವ ಅಧಿಕಾರ ನೀಡಬೇಕೋ ನೀಡಲಾಗುವುದು. ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪಂಚಾಯ್ತಿಯಲ್ಲೂ ಮಾಡಲು ಸಾಧ್ಯವಿಲ್ಲ. ಉಮಾಶ್ರೀ ಅವರು ಮೀಸಲಾತಿ ವಿಚಾರ ಪ್ರಸ್ತಾಪ ಮಾಡಿದ್ದು, ಮೀಸಲಾತಿ ನೀಡಿದ್ದೇವೆ. ರಾಜಕೀಯವಾಗಿ ಮೀಸಲಾತಿಗೆ ನಾವು ಬದ್ಧವಾಗಿದ್ದೇವೆ. ಹಿಂದುಳಿದವರಿಗೆ ಮೀಸಲಾತಿ, ಮಹಿಳೆಯರಿಗೆ 50% ಮೀಸಲಾತಿ ನೀಡಲೇಬೇಕು. ಈ ವಿಚಾರವಾಗಿ ಗಮನಹರಿಸುತ್ತೇವೆ” ಎಂದು ಭರವಸೆ ನೀಡಿದರು. ಬೆಂಗಳೂರು ಭವಿಷ್ಯ ಎಲ್ಲರ ಜವಾಬ್ದಾರಿ. ಹೀಗಾಗಿ ಪಕ್ಷಾತೀತವಾಗಿ ಒಮ್ಮತದಿಂದ ಈ ಮಸೂದೆಯನ್ನು ಅಂಗೀಕರಿಸಬೇಕು” ಎಂದರು.
“1970 ರಲ್ಲಿ ಇಂದಿರಾಗಾಂಧಿ ಅವರು ಸಮೀಕ್ಷೆ ಮಾಡಿಸುತ್ತಾರೆ. ಅದರ ಪ್ರಕಾರ ಶೇ.31 ರಷ್ಟು ಗ್ರಾಮೀಣ ಭಾಗದ ಜನರು ನಗರ ಭಾಗಕ್ಕೆ ವಲಸೆಯಾಗುತ್ತಿ ರುತ್ತಾರೆ. ಈಗ ಶೇ 39 ರಷ್ಟು ಜನಸಂಖ್ಯೆ ನಗರ ಹಾಗೂ ಅರೆ ನಗರ ಪ್ರದೇಶಗಳಿಗೆ ಬಂದು ನೆಲೆಸಿದೆ. ನಾನು ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ದಿ ಸಚಿವನಾಗಿದ್ದಾಗ ನಗರದ ಜನಸಂಖ್ಯೆ 70 ಲಕ್ಷವಿತ್ತು. ಇಂದು 1.40 ಲಕ್ಷಕ್ಕೆ ಏರಿದೆ. ಬೊಮ್ಮನಹಳ್ಳಿ, ರಾಜರಾಜೇಶ್ವರಿ, ನಗರ ಸೇರಿದಂತೆ ಬೆಂಗಳೂರಿನ ಅನೇಕ ಭಾಗಗಳು ಸಿಎಂಸಿಗೆ ಸೇರಿದ್ದವು. ದಳ- ಬಿಜೆಪಿಯವರು ಸೇರಿ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದರು. ಈ ಭಾಗಗಳಿಗೆ ಇತ್ತೀಚೆಗೆ ನಾನು ಕಾವೇರಿ 5 ನೇ ಹಂತದ ಮೂಲಕ ಕುಡಿಯುವ ನೀರು ಕೊಟ್ಟಿದ್ದೇನೆ” ಎಂದರು.
“ಸ್ಥಳೀಯ ಸಂಸ್ಥೆಗಳ ಬಗ್ಗೆ ಬೆಂಗಳೂರಿನಲ್ಲಿ ಒಮ್ಮೆ ಸಭೆ ನಡೆದಾಗ ನಾನು ರಾಜೀವ್ ಗಾಂಧಿ ಅವರನ್ನು ಪ್ರಶ್ನೆ ಮಾಡಿದೆ. ನಮ್ಮಲ್ಲಿ ಆಗಲೇ ಸ್ಥಳೀಯ ಸಂಸ್ಥೆಗಳು ಇವೆಯಲ್ಲಾ ಎಂದು ಕೇಳಿದೆ. ಅವರು ಹಿಂದುಳಿದವರಿಗೆ, ಮಹಿಳೆಯರಿಗೆ, ಪರಿಶಿಷ್ಟರಿಗೆ ಮೀಸಲಾತಿ ಇರಬೇಕು ಎಂದು ಸೂಚಿಸಿದರು. ಅವರ ಕಾಲದಲ್ಲಿ ತಿದ್ದುಪಡಿಯಾಯಿತು, ನಂತರ ಪಿ.ವಿ.ನರಸಿಂಹರಾವ್ ಅವರ ಕಾಲದಲ್ಲಿ ಜಾರಿಗೆ ಬಂದಿತು” ಎಂದು ಹೇಳಿದರು.
“ಈ ವಿಧೇಯಕದ ಅಡಿ ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ತರಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಸ್ಥಳೀಯ ಮಟ್ಟದಲ್ಲಿ ಶಾಸಕರಿಗೆ ನಿಯಂತ್ರಣ ಇರಬೇಕು, ವಾರ್ಡ್ ಸಮಿತಿಗಳಾಗಬೇಕು, ಅಲ್ಲಿ ಜನಪ್ರತಿನಿಧಿಗಳು ಇರಬೇಕು. ಈ ಮಸೂದೆಯಲ್ಲಿ ಎಲ್ಲಾ ಶಾಸಕರು, ಸಂಸದರು ಕೂಡ ಸದಸ್ಯರಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಉಪಾಧ್ಯಕ್ಷರಾಗಿರುತ್ತಾರೆ. ಪಾಲಿಕೆ ರಚನೆಯನ್ನು ನಾವು ಯಾವುದೇ ರೀತಿ ಬದಲಾವಣೆ ಮಾಡುತ್ತಿಲ್ಲ” ಎಂದು ತಿಳಿಸಿದರು.
ಸದಸ್ಯ ಟಿ.ಎ.ಶರವಣ ಅವರು ಏಳು ಪಾಲಿಕೆಗಳನ್ನಾಗಿ ಮಾಡುತ್ತಿರುವುದು ಸರಿಯಲ್ಲ ಎಂದಾಗ, “ತಕ್ಷಣಕ್ಕೆ ಏಳು ಪಾಲಿಕೆ ಮಾಡುತಿಲ್ಲ. ಸದ್ಯದ ಮಟ್ಟಿಗೆ ಎರಡು, ಮೂರು ಆಗಬಹುದು. ಇನ್ನೂ ಬೆಳೆದ ಕಾಲಕ್ಕೆ ಏಳು ಪಾಲಿಕೆ ಮಾಡಬಹುದು ಎಂದಿದ್ಧೇವೆ” ಎಂದು ಡಿಸಿಎಂ ಸ್ಪಷ್ಟನೆ ನೀಡಿದರು.
“ವಿರೋಧ ಪಕ್ಷಗಳ ಸದಸ್ಯರಿಗೆ ಸದನದಲ್ಲಿ ಚರ್ಚೆ ಮಾಡುವ ಅಧಿಕಾರವಿದೆ. ಜಂಟಿ ಸದನ ಸಮಿತಿಯಲ್ಲಿದ್ದ ಸದಸ್ಯರಾಗಿದ್ದರೂ ಕೂಡ ಸದನದಲ್ಲಿ ಚರ್ಚೆ ಮಾಡಿ ತಮ್ಮ ಆಕ್ಷೇಪ ವ್ಯಕ್ತಪಡಿಸುವ ಅಧಿಕಾರ ಸದಸ್ಯರಿಗೆ ಅವಕಾಶವಿದೆ. ಒಂದು ವೇಳೆ ಜಂಟಿ ಸದನ ಸಮಿತಿ ಸಭೆ ವೇಳೆ ಸದಸ್ಯರು ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಲು ಮರೆತಿದ್ದರೆ ಅದನ್ನು ಸದನದಲ್ಲಿ ತಿಳಿಸಬಹುದು. ಅವರ ಹಕ್ಕನ್ನು ನಾವು ತಡೆಯಲು ಸಾಧ್ಯವಿಲ್ಲ. ಅವರು ಮಾತನಾಡುವುದು ತಪ್ಪು ಎಂದು ಹೇಳುವುದು ನಮ್ಮ ಕೆಲಸವಲ್ಲ. ಅವರು ಏನು ಬೇಕಾದರೂ ಚರ್ಚೆ ಮಾಡಲಿ, ಅವರಿಂದ ಬರುವ ಉತ್ತಮ ಸಲಹೆಗಳನ್ನು ನಾವು ತೆಗೆದುಕೊಳ್ಳೋಣ. ನೀವು ಹೇಳಿರುವ ಅಂಶಗಳನ್ನು ನಾವು ಪಟ್ಟಿ ಮಾಡಿಕೊಂಡಿದ್ದೇವೆ. ಕೆಳಮನೆಯಲ್ಲಿ 15 ಸದಸ್ಯರು ಚರ್ಚೆ ಮಾಡಿದ್ದು, ಇಲ್ಲೂ ಎಲ್ಲರೂ ಚರ್ಚೆ ಮಾಡಿ, ರಾತ್ರಿ 2 ಗಂಟೆಯಾದರೂ ನಾನು ಚರ್ಚೆಯನ್ನು ಆಲಿಸಲು ಸಿದ್ಧ” ಎಂದು ಶಿವಕುಮಾರ್ ಪ್ರತಿಪಕ್ಷ ಸದಸ್ಯರಿಗೆ ಹೇಳಿದರು.