ಈ ಲೇಖನ ಕೇವಲ ಪ್ರಯಾಗ್‌ರಾಜ್ ಒಂದನ್ನೇ ಗುರಿ ಮಾಡಿಕೊಂಡಿಲ್ಲ. ಪ್ರಪಂಚದಲ್ಲಿ ಬೇರೆ ಬೇರೆ ದೇಶಗಳು ತಮ್ಮ ನದಿ ಮತ್ತು ಸಮುದ್ರಗಳನ್ನು ಪ್ರೀತಿಯಿಂದ ಕಾಪಾಡಿಕೊಳ್ಳುತ್ತಿವೆ. ಕಾರಣ ಅವರಿಗೆ ನೀರಿನಿಂದ ಏನು ಉಪಯೋಗ ಎನ್ನುವುದು ಅರ್ಥವಾಗಿದೆ. ನಮ್ಮ ದೇಶದ ಜನರಿಗೆ ನೀರು ಪಾಪ ಕಳೆಯುವ ಅಮೃತ ಅಥವಾ ತೀರ್ಥ. ಗಂಗೆಯಲ್ಲಿ ಮುಳುಗಿದರೆ ಪಾಪಗಳು ನಾಶವಾಗುತ್ತವೆ ಎಂದಿದ್ದರೆ ಪಾಪಿಗಳು ನಿತ್ಯ ಪಾಪಗಳನ್ನೇ ಮಾಡಿ ನದಿಯಲ್ಲೋಗಿ ಮಿಂದು ಪುಣ್ಯ ತಂದುಕೊಳ್ಳುತ್ತಿದ್ದರು. ಜನ ಮರ ಗಿಡ ಹುತ್ತ ಹುಲ್ಲು, ಕಲ್ಲುಗಳನ್ನು ಪೂಜಿಸಿಕೊಂಡು ಬಂದಂತೆ ನದಿಗಳನ್ನು ಪೂಜಿಸಿದರು. ಗಂಗೆ ಮಾಯವಾದ ದಿನ ಮನುಷ್ಯ ಕೂಡಾ ಮಾಯವಾಗುತ್ತಾನೆ ಎನ್ನುವ ಕನಿಷ್ಠ ಎಚ್ಚರಿಕೆ ಇದ್ದರೆ ನಾವು ಹೋದಲ್ಲಿ ಬಂದಲ್ಲಿ ನದಿಗಳನ್ನು ಭಕ್ತಿಯ ಹೆಸರಲ್ಲಿ ಹಾಳು ಮಾಡುತ್ತಿರಲಿಲ್ಲ.
ಜಾತಿ ಧರ್ಮಗಳು ಎಲ್ಲೆಡೆ ಮುಖ್ಯವಾಹಿನಿಗೆ ಬಂದು ಸದ್ದು ಮಾಡುತ್ತಿವೆ. ಭಕ್ತಿಯ ಹೆಸರಲ್ಲಿ ಪ್ರಕೃತಿಯ ಮೇಲೆ ನಡೆಸುತ್ತಿರುವ ಅತ್ಯಾಚಾರ ಅರ್ಥ ಮಾಡಿಸು ವವರೇ ಇಲ್ಲದಂತಾಗಿದ್ದಾರೆ. ಜನರ ನಂಬಿಕೆ, ಆಚರಣೆ ವಿರುದ್ಧ ಮಾತನಾಡಿದರೆ ದೇಶದ್ರೋಹಿ, ನಾಸ್ತಿಕ ಅಥವಾ ಅನ್ಕಲ್ಚರಿಸ್ಟ್ ಆಗಿ ಬಿಂಬಿತನಾಗುತ್ತಾನೆ. ನಮ್ಮಲ್ಲಿ ಪರಿಸರ ಪ್ರೇಮಿಗಳು ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಉಸಿರುಬಿಡದಷ್ಟು ಮಟ್ಟಕ್ಕೆ ಪ್ರಶಸ್ತಿಯ ಭಾರಗಳಲ್ಲಿ ತೊಳಲಾಡುತ್ತಿದ್ದಾರೆ. ಸಾಮಾಜಿಕ ಪ್ರಜ್ಞೆ ಕಾಪಾಡಬೇಕಾದ ಮಾಧ್ಯಮಗಳು ಟಿಆರ್ಪಿಯ ಉಮೇದಿನಲ್ಲಿ ನರಳಾಟ ನಡೆಸುತ್ತಿವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾವುದೇ ಧರ್ಮವಿರಲಿ ಆಚರಣೆ ಯಿಂದ ಹಾನಿ ಮತ್ತು ಉಪಯೋಗ ಎರಡರ ಸಂದೇಶ ಹೇಳಬೇಕಾಗುತ್ತದೆ. ಭಕ್ತಿಯ ವಿಷಯದಲ್ಲಿ ಜನರನ್ನು ಮೀರಿಸುವವರು ಯಾರೂ ಇಲ್ಲ. ಅಷ್ಟು ಭ್ರಮೆಯ ತುತ್ತ ತುದಿಯಲ್ಲಿ ತಮ್ಮನ್ನು ತಾವು ಬಲಿಮಾಡಿಕೊಂಡರು ಸರಿ ನಾವು ಸ್ವರ್ಗಕ್ಕೆ ಹೋಗುವೆವು ಎನ್ನುವ ನಂಬಿಕೆಯನ್ನು ಮಾತ್ರ ಬಿಟ್ಟುಕೊಡುವುದಿಲ್ಲ.
ಭೂಮಿಯ ಮೇಲೆ ನೀರು ಇಲ್ಲದಿದ್ದರೆ ಯಾವ ಜೀವಿಯೂ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಅಮೃತಕ್ಕೆ ಸಮನಾದ ನೀರನ್ನು ಇವತ್ತು ಭೂಮಿಯ ಮೇಲಿ ನಿಂದಲೇ ಮಾಯವಾಗಿಸುವ ಕಂಕಣವನ್ನು ಮನುಷ್ಯ ತೊಟ್ಟುಕೊಂಡಿದ್ದಾನೆ. ಅಂತರ್ಜಲವೆಲ್ಲವೂ ಬತ್ತಿ ಹೋಗುತ್ತಿದೆ. ಎಷ್ಟೋ ನದಿಗಳು ಕಣ್ಣಿಗೆ ಕಾಣದಂತೆ ಮಾಯವಾಗಿವೆ. ಇನ್ನೂ ಅಷ್ಟೋ ಇಷ್ಟೋ ನೈಜತೆ ಉಳಿಸಿಕೊಂಡಿರುವ ನದಿಗಳ ಮೇಲೆ ಈ ಮನುಷ್ಯನ ಮೌಢ್ಯಗಳು ದಾಳಿ ಮಾಡುತ್ತಿವೆ. ಬೆಂಗಳೂರಿನಲ್ಲಿ ಹರಿಯುತ್ತಿದ್ದ ವೃಷಭಾವತಿ ನದಿ ಅರ್ಕಾವತಿ ನದಿಯ ಉಪನದಿಯಾಗಿದ್ದು, ಪ್ರಾಚೀನ ಕಾಲದಿಂದಲೂ ಜನರು ಈ ನೀರನ್ನು ಕುಡಿಯುವುದಕ್ಕೆ ಬಳಸುತ್ತಿದ್ದರು. ನಾಗರಿಕತೆ ಬಂದಂತೆ ವೃಷಭಾವತಿಯನ್ನು ಹೊಲಸು ಮಾಡುವುದಕ್ಕೆ ನಿಂತರು. ಕೈಗಾರಿಕೆ ಮತ್ತು ಜನಸಂಖ್ಯೆ ವೃದ್ಧಿಸಿದಂತೆ ಅಲ್ಲಿಯ ವಿಷಕಾರಿ ನೀರು ಹಾಗೂ ಗಟಾರದ ನೀರು ವೃಷಭಾವತಿಯ ಒಡಲನ್ನು ಸೇರಿ ಇಂದು ಅದರ ಕುರುಹು ಸಹ ಉಳಿಯದಂತೆ ನಾಶ ಮಾಡಲಾಗಿದೆ. ಈ ನದಿ ಜೀವಂತವಾಗಿದ್ದರೆ ಬೆಂಗಳೂರಿನ ಜನರ ದಾಹ ತೀರಿಸುತಿತ್ತು. ಇವತ್ತು ಅಲ್ಲಿ ಜನ ನೀರಿಗೂ ಹಣ ಕೊಟ್ಟು ಕುಡಿಯುವ ಪರಿಸ್ಥಿತಿ ಬಂದೊದಗಿದೆ. ಮಂಡ್ಯ ಜಿಲ್ಲೆಯ ಕಾವೇರಿ ಬತ್ತಿ ಹೋದರೆ ಬೆಂಗಳೂರಿನ ಜನ ಪರದಾಡುವಂತಾಗಿದೆ.
ಕನಾಟಕದ ಹಲವು ನದಿಗಳು ಪೂಜನೀಯ ಸ್ಥಾನದಲ್ಲೇ ಇವೆ. ದೇವಸ್ಥಾನಕ್ಕೆ ತೆರಳುವ ಲಕ್ಷಾಂತರ ಮಂದಿ ಅಲ್ಲಿ ನಿತ್ಯ ಸ್ನಾನ ಮಾಡುತ್ತಾರೆ. ಧರ್ಮಸ್ಥಳದ ನೇತ್ರಾವತಿ ಒಡಲಿಗೆ ಪ್ರತಿನಿತ್ಯ ಹಳೆಯ ಬಟ್ಟೆ, ಕೊಳೆ, ದನಕರುಗಳ ಶವಗಳನ್ನು ಎಸೆಯಲಾಗುತ್ತದೆ. ಸರ್ಕಾರ ಮತ್ತು ಪರಿಸರ ಕಾಳಜಿಯುಳ್ಳ ವ್ಯಕ್ತಿಗಳು ಎಷ್ಟೇ ಮುಂಜಾಗ್ರತೆ ವಹಿಸಿದರೂ ಜನರ ಅಂಧ ಆಚರಣೆಗಳು ಕಡಿಮೆಯಾಗುತ್ತಿಲ್ಲ. ಸರಿಯಾಗಿ ಮಳೆ ಇಲ್ಲದ್ದು ಒಂದು ಕಡೆಯಾದರೆ ಅಭಿವೃದ್ಧಿಯ ಹೆಸರಲ್ಲಿ ಬೆಟ್ಟಗುಡ್ಡ ಗಳನ್ನು ನಾಶ ಮಾಡಿ ನದಿಯ ಪಾತ್ರಗಳನ್ನೇ ದಿಕ್ಕು ತಪ್ಪಿಸುತ್ತಿರುವುದು ಮುಂದಿನ ಅಪಾಯವನ್ನು ಕಣ್ಣ ಮುಂದೆ ತೆರೆದಿಡುತ್ತಿದೆ.
ಇನ್ನು ಭಾರತದಲ್ಲಿ ವರ್ಷಕ್ಕೊಮ್ಮೆ ನಡೆಯುವ ನದಿ ಪಾತ್ರದ ಜಾತ್ರೆಗಳಲ್ಲಿ ಜನ ಮಿಂದೇಳುವುದು ಸಾಮಾನ್ಯ ಸಂಗತಿ. ಪಾಪ ಪುಣ್ಯದ ಪ್ರಜ್ಞೆ ಬಿತ್ತಿದ ವ್ಯಕ್ತಿಗಳಿಗೆ ನಮ್ಮ ಆಚರಣೆಗಳಿಂದ ಪ್ರಕೃತಿ ನಾಶವಾಗುತ್ತದೆ ಎಂಬ ಅರಿವು ಇರಲಿಲ್ಲವೇ? ಎಂದರೆ ತಮಗೆ ಲಾಭವಾಗುವ ಕಡೆ ಯಾವುದು ನಾಶವಾದರೂ ನಮಗೆ ಮುಖ್ಯ ವಾಗುವುದಿಲ್ಲ. ಒಂದು ಆಚರಣೆಯಿಂದ ವ್ಯಕ್ತಿಗೆ ಸಮಾಧಾನ ಶಾಂತಿ ಸಿಗಬಹದು. ಮತ್ತೊಬ್ಬನಿಗೆ ಲಾಭವಾಗಬಹುದು. ಇವೆರಡನ್ನು ಮೀರಿದ್ದು ನಮ್ಮ ಜೀವ ಉಳಿಸುವ ನೀರು. ಅದು ಹೇಗೆ ಹರಿಯುತ್ತದೋ ಹಾಗೆ ಅದನ್ನು ಬಿಟ್ಟು ಬಿಡುವ ದೊಡ್ಡಗುಣವನ್ನು ನಾವು ಇನ್ನು ಮುಂದಾದರೂ ತೋರಬೇಕು. ಈಗಾಗಲೇ ಹಳ್ಳಿ ಮತ್ತು ನಗರ ಪಟ್ಟಣಗಳಲ್ಲಿ ಇದ್ದ ಕೆರೆ, ಕಟ್ಟೆ, ಕಲ್ಯಾಣಿ, ನದಿಗಳು ಬತ್ತಿ ಹೋಗಿ ಮುಂದಿನ ಪೀಳಿಗೆಗೆ ನೀರಿನ ಸೆಲೆಗಳೇ ಇಲ್ಲದಂತೆ ಮಾಡಿವೆ.
ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಬಗ್ಗೆ ಪ್ರಪಂಚವೇ ಮಾತನಾಡಿಕೊಳ್ಳುತ್ತಿದೆ. ರಾಕ್ಷಸರ ಮೇಲೆ ದೇವರುಗಳು ವಿಜಯ ಸಾಧಿಸಿದ ಸಂಕೇತ ಎನ್ನುವುದನ್ನು ಹೇಳುತ್ತಾರೆ. ಇಲ್ಲಿ ಸ್ನಾನ ಮಾಡಿದರೆ ಮೋಕ್ಷಕ್ಕೆ ಹೋಗುತ್ತೇವೆ ಎನ್ನುವ ನಂಬಿಕೆ ಹಿಂದೂಗಳದು. ಲಕ್ಷಾಂತರ ಸಂಖ್ಯೆಯ ನಾಗಸಾಧು ಗಳು ಮತ್ತು ಅಘೋರಿಗಳು ಆಗಮಿಸಿ ಪುಣ್ಯಸ್ನಾನಗಳನ್ನು ಮಾಡಿದ್ದಾರೆ. ಕಾರಣ ಪುರಾಣದಲ್ಲಿ ಸಮುದ್ರ ಮಥನದ ಕಥೆಯನ್ನು ನಾವು ಕೇಳಿದ್ದೇವೆ. ಅದರಲ್ಲಿ ಅಮೃತದ ಹನಿಯೊಂದು ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ಬಿದ್ದಿತ್ತು. ಆ ಜಾಗದಲ್ಲಿ ಸ್ನಾನ ಮಾಡಿದರೆ ನಮ್ಮ ಪಾಪಗಳೆಲ್ಲ ಕಳೆದು ಪುಣ್ಯ ಬರುತ್ತದೆ. ನಮ್ಮ ಮೈಗೂ ಅಮೃತ ಅಂಟಿಕೊಳ್ಳುತ್ತದೆ ಎನ್ನುವ ಭಾವದಿಂದ ಮುಂದೆ ನಲ್ವತ್ತೈದು ಕೋಟಿಗೂ ಅಧಿಕ ಜನ ಅಲ್ಲಿ ಪುಣ್ಯ ಸ್ನಾನ ಮಾಡಬಹುದೆಂದು ಊಹೆ ಮಾಡಿ ದ್ದಾರೆ. ಇಷ್ಟೆಲ್ಲದರ ನಡುವೆ ಕುಂಭಮೇಳದಲ್ಲಿ ಸ್ನಾನ ಮಾಡಲು ಘಾಟುಗಳಿಗಿಳಿದ ಜನರು ಗಂಗೆಯ ಸ್ಥಿತಿ ನೋಡಿ ಮೂಗು ಮುಚ್ಚಿಕೊಂಡಿದ್ದಾರೆ. ಒಂದು ರೀತಿ ಕೆಸರು ತುಂಬಿದ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳುತ್ತಾರೆ.
ಪ್ರಯಾಗ್ ರಾಜ್ ರಾಜಕೀಯ ಪ್ರತಿಷ್ಠೆಯಾಗಲಿ, ಇಲ್ಲ ಭಕ್ತಿಯ ಭವಸಾಗರವೇ ಆಗಲಿ. ನದಿಗೆ ಕೋಟ್ಯಾಂತರ ಜನರು ಮುಳುಗಿ ಸೇರಿಸುತ್ತಿರುವ ಕಸದ ಬಗ್ಗೆ ನಾವು ಮಾತನಾಡಬೇಕಲ್ಲ. ಗಂಗಾ, ಯುಮುನಾ ಮತ್ತು ಸರಸ್ವತಿ ಕೂಡುವ ಈ ಜಾಗವನ್ನು ಪವಿತ್ರವೆಂದು ಪೂಜಿಸುವುದು ಸರಿ. ಆದರೆ ಆ ನದಿ ಪಾತ್ರಗಳನ್ನು ಭಕ್ತಿಯ ಹೆಸರಲ್ಲಿ ಹಾಳು ಮಾಡುತ್ತಿರುವುದು ನದಿಗೆ ಮನುಷ್ಯರು ಮಾಡುತ್ತಿರುವ ಅಪಚಾರವೆಂದು ಯಾಕೆ ಅನಿಸುವುದಿಲ್ಲ? ಕೋಟ್ಯಂತರ ಜನ ಒಮ್ಮೆಗೆ ನದಿಗೆ ಇಳಿಯುವುದರಿಂದ ನದಿಗೆ ಆಗುವ ಗಾಯದ ಬಗ್ಗೆಯೂ ನಮ್ಮ ಭಕ್ತರಿಗೆ ಚಿಂತೆ ಇರಬೇಕು. ಕಾಶಿ ವಾರಣಾಸಿಯಲ್ಲಿ ಗಂಗೆಯ ಕಲ್ಮಶ ಕಳೆಯಲು ಸಾವಿರಾರು ಕೋಟಿ ಹಣವನ್ನು ಕೇಂದ್ರ ಸರ್ಕಾರ ವ್ಯಯ ಮಾಡಿದೆ. ಈಗ ಪ್ರಯಾಗ್ ರಾಜ್‌ನಲ್ಲಿ ಸಾವಿರಾರು ಕೋಟಿ ವೆಚ್ಚ ಮಾಡಿ, ಭಕ್ತರನ್ನು ಗಂಗೆಯಲ್ಲಿ ಮುಳುಗಿಸಿ ಪುಣ್ಯ ದಯಪಾಲಿಸುವ ಮಾತುಗಳನ್ನು ಅಲ್ಲಿನ ಸರ್ಕಾರ ಮಾತನಾಡಿದೆ. ಆದರೆ, ಸಾವಿರಾರು ಕೋಟಿ ಆದಾಯವೂ ಇಲ್ಲಿಗೆ ಹರಿದು ಬಂದಿರುವುದನ್ನು ನಾವು ಮರೆಯ ಬಾರದು. ಕುಂಭಮೇಳವನ್ನು ಕೇವಲ ಭಕ್ತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಬಾರದು. ನಮಗೆ ಸಾಮಾಜಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಕೂಡಾ ಅವಶ್ಯಕ.
ವಿಶ್ವಗುರು ಎನಿಸಿಕೊಂಡ ಬಸವಣ್ಣನವರು ‘ʼನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತವರಯ್ಯಾ, ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ” ಎಂದಿದ್ದಾರೆ. ಸರಿಯಾದ ಶಿಕ್ಷಣ ವ್ಯವಸ್ಥೆಗಳಿಲ್ಲದೆ ನಾವು ಮಕ್ಕಳನ್ನು ಮತ್ತು ಯುವಕರನ್ನು ಮೌಢ್ಯದ ಕೂಪಕ್ಕೆ ತಳ್ಳುತ್ತಿದ್ದೇವೆ. ಮಹಾಕುಂಭ ಮೇಳದಲ್ಲಿ ಮಿಂದವರಲ್ಲೆ ನೂರು ವರ್ಷ ಬದುಕುವುದಿಲ್ಲ. ಅಲ್ಲಿ ಯಾರಿಗೆ ಎಷ್ಟು ರೋಗಗಳು ಅಂಟಿಕೊಳ್ಳುತ್ತವೆ ಎನ್ನುವುದನ್ನು ಮುಂದಿನ ದಿನದಲ್ಲಿ ಯೋಚಿಸಬೇಕಿದೆ. ಜೀವನದ ನೈಜ ಸತ್ಯಗಳನ್ನು ತಿಳಿಯುವುದಕ್ಕೆ ಬಿಡದ ನಮ್ಮ ವ್ಯವಸ್ಥೆ ಭಕ್ತಿಯ ಹೆಸರಲ್ಲಿ ಪ್ರಕೃತಿಗೆ ಮಾತ್ರ ಉರುಳು ಹಾಕುತ್ತಿಲ್ಲ. ಜನರಿಗೂ ಮರುಳು ಮಾಡಿ ಗಂಗೆಯನ್ನು ಹಾಳು ಮಾಡುತ್ತಿದ್ದಾರೆ. ಒಂದು ಕಾಲಕ್ಕೆ ಎಲ್ಲಾ ನದಿಗಳು ಬತ್ತಿ ಹೋದ ಮೇಲೆ ನಮ್ಮ ಸಾಧು ಸಂತರು ಭೂಮಿಗೆ ಮಳೆ ತರಿಸುತ್ತಾರೆ. ಹೊಳೆ ಹರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ಇರುವ ಜನರು ನಿಜಕ್ಕೂ ಅಜ್ಞಾನದ ಪರಕಾಷ್ಠೆಯಲ್ಲಿ ಇದ್ದಾರೆ. ವೈಜ್ಞಾನಿಕವಾಗಿ ಯೋಚಿಸಿದರೆ ಪ್ರತಿನಿತ್ಯ ನಾವು ಹರಿಯುವ ಗಂಗೆಗೆ ವಿಷ ಉಣಿಸಿ ಅವಳನ್ನು ನಮ್ಮಿಂದ ದೂರ ಮಾಡಿಕೊಳ್ಳುತ್ತಿzವೆ. ಅದರಲ್ಲಿ ಈ ಮಹಾಕುಂಭಮೇಳ, ದೀಪೋ ತ್ಸವ, ಜಾತ್ರೆ, ಅಂತೆಲ್ಲ ನದಿಗಳಿಗೆ ಕಸ ಮತ್ತು ವಿಷ ಎರಡನ್ನು ಸುರಿದು ನಾವು ಪುಣ್ಯವಂತರು ಎನ್ನುವ ಠೀವಿಯಲ್ಲಿ ಓಡಾಡುತ್ತಿದ್ದೇವೆ.
– ಹಳ್ಳಿವೆಂಕಟೇಶ್
ಲೇಖಕ, ಸಂಶೋಧಕ
ಮೊ: 9535723673