ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಶೀಘ್ರದಲ್ಲೇ ನಡೆಯಲಿದೆ ಎಂಬ ಸುಳಿವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ.
ಕಲಬುಗರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ೮ ದಿನದಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ ಎಂದರು.
ಈಗಾಗಲೇ ಒಡಿಶಾದಲ್ಲಿ ಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಹಿಂದುಳಿದ ವರ್ಗದ ನಾಯಕರನ್ನು ನೇಮಿಸಲಾಗಿದೆ. ಇನ್ನೆರಡು ದಿನದಲ್ಲಿ ಇನ್ನು ಕೆಲವು ರಾಜ್ಯಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ೮ ದಿನದಲ್ಲಿ ದೇಶದ ಎಲ್ಲಾ ರಾಜ್ಯಾಧ್ಯಕ್ಷರ ನೇಮಕ ಕುರಿತು ತೀರ್ಮಾನಿಸಲಾಗುವುದು ಎಂದು ಖರ್ಗೆ ಹೇಳಿದರು.
ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತು ರಾಜ್ಯದ ಮುಖಂಡರು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಸಿಸಿಐ ಅಧ್ಯಕ್ಷರಾಗಿ ಹಲವಾರು ಮುಖಂಡರು ಭೇಟಿ ಮಾಡುತ್ತಾರೆ. ರಾಜ್ಯದವರು ಅಂದ ಮೇಲೆ ಅವರಿಗೆ ಬೇಗ ಭೇಟಿಗೆ ಅವಕಾಶ ಸಿಗುತ್ತದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಸತೀಶ್ ಜಾರಕಿಹೊಳಿ, ಪರಮೇಶ್ವರ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮುಂತಾದ ನಾಯಕರು ಭೇಟಿ ಮಾಡುವುದು ಸಹಜ. ಇದಕ್ಕೆ ಊಹಾಪೋಹಾ ಕಲ್ಪಿಸುವ ಅಗತ್ಯವಿಲ್ಲ. ರಾಜ್ಯದ ಮುಖಂಡರು ಬರುತ್ತೇನೆ ಅಂದಾಗ ಬೇಡ ಅನ್ನಲು ಸಾಧ್ಯವೇ ಎಂದು ಖರ್ಗೆ ಪ್ರಶ್ನಿಸಿದರು.