13 ವರ್ಷಗಳಿಂದ ಕೋಮಾದಲ್ಲಿದ್ದ 31 ವರ್ಷದ ವ್ಯಕ್ತಿಗೆ ಸುಪ್ರೀಂಕೋರ್ಟ್ ದಯಾಮರಣ ನೀಡಲು ಸಮ್ಮತಿಸುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಎರಡು ವೈದ್ಯಕೀಯ ಮಂಡಳಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ತೀರ್ಪು ಪ್ರಕಟಿಸಿದೆ.
ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ 2013 ರಲ್ಲಿ ಪೇಯಿಂಗ್ ಗೆಸ್ಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಕೋಮಾ ತಲುಪಿ ೧೫ ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಿಜಿಐ ಚಂಡೀಗಢ, ದೆಹಲಿಯ ಏಮ್ಸ್, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆ ಮತ್ತು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಚೇತರಿಕೆ ಕಂಡು ಬರಲಿಲ್ಲ. ದೀರ್ಘಕಾಲದ ವೈದ್ಯಕೀಯ ಚಿಕಿತ್ಸೆ ಮನೆಯರಿಗೂ ಹೊರೆಯಾಗಿತ್ತು. ಪೋಷಕರು ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್‌ಗೆ ಅರ್ಜಿ ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ದಯಾಮರಣ ಕುರಿತು ಕಾನೂನು ತರುವಂತೆ ಕೇಂದ್ರವನ್ನು ಒತ್ತಾಯಿಸಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ವೈದ್ಯಕೀಯ ಮಂಡಳಿಗಳು ರೋಗಿಯ ಜೀವ ಬೆಂಬಲವನ್ನು ಹಿಂತೆಗೆದುಕೊಳ್ಳುವುದನ್ನು ಪ್ರಮಾಣೀಕರಿಸಿದ ನಂತರ ನ್ಯಾಯಾಂಗ ಹಸ್ತಕ್ಷೇಪ ಸಾಮಾನ್ಯವಾಗಿ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ವೈದ್ಯಕೀಯ ಮಂಡಳಿಗಳಿಂದ ಸೂಚನೆಯನ್ನು ಪಡೆಯುವಂತೆ ಸುಪ್ರೀಂಕೋರ್ಟ್ ಹೈಕೋರ್ಟ್‌ಗೆ ಸೂಚಿಸಿದೆ.
ಚಂಡೀಗಢದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ಹರೀಶ್ ರಾಣಾ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಪೆಟ್ಟು ಬಿದ್ದ ಬಳಿಕ ಕೋಮಾಗೆ ಜಾರಿದ್ದರು.


