ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ಬಿಜೆಪಿ ಶಾಸಕ ಸುನಿಲ್ ಕುಮಾರ್, ಕಳೆದ ತಿಂಗಳು ಚತ್ತೀಸ್ಗಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಟ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ, ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶರಣಾಗಿರುವ ಆರು ನಕ್ಸಲರಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಲು ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಹೇಳಿದ ಸಿಎಂ, ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡಲಿದೆ. ಇವರ ವಿರುದ್ಧದ ಪ್ರಕರಣಗಳ ಶೀಘ್ರ ಇತ್ಯರ್ಥ್ಕಕ್ಕೆ ಅಗತ್ಯವಾದ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ ಮುಂದಿನ ದಿನಗಳಲ್ಲಿ ಇವರೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ಬದುಕನ್ನು ಕಳೆಯಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 41 ಲಕ್ಷ ರೂ. ನೆರವು ನೀಡಿರುವುದು ಶಾಸಕ ಸುನಿಲ್ ಕುಮಾರ್ ಗೊತ್ತಿರಲಿಲ್ಲವೇ, ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನಿಲ್ ಕುಮಾರ್ ಅವರಿಗೆ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶರಣಾಗಿರುವ ನಕ್ಸಲರು ಅನುಸರಿಸಿದ ಹಿಂಸಾ ಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಇವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರೂ ಅಲ್ಲ, ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.