ಶತಕ ವಂಚಿತ ಟ್ರಿಸ್ಟಿನ್ ಸ್ಟಬ್ಸ್ ಭರ್ಜರಿ ಆಟದಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲೂ ಮೇಲುಗೈ ಸಾಧಿಸಿದ್ದು, ಭಾರತಕ್ಕೆ 549 ರನ್ ಗಳ ಕಠಿಣ ಗುರಿ ಒಡ್ಡಿದೆ.
ಗುವಾಹತಿಯಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನ ವಿಕೆಟ್ ನಷ್ಟವಿಲ್ಲದೇ 22 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ ಚಹಾ ವಿರಾಮದ ವೇಳೆಗೆ 5 ವಿಕೆಟ್ ಗೆ 260 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.
ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ 288 ರನ್ ಗಳಿಸಿದ್ದು, ಇದೀಗ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ 549 ರನ್ ಗಳ ಕಠಿಣ ಗುರಿ ಬೆನ್ನಟ್ಟಿ ಗೆಲುವು ಸಾಧಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಭಾರತ ಡ್ರಾ ಮಾಡಿಕೊಂಡರೂ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ತವರಿನಲ್ಲಿ ಸೋಲಿಸಿದ ದಾಖಲೆ ಬರೆಯಲಿದೆ. ಒಂದು ವೇಳೆ ಗೆದ್ದರೆ ಇದೇ ಮೊದಲ ಬಾರಿಗೆ ವೈಟ್ ವಾಷ್ ಮಾಡಿದ ಸಾಧನೆ ಮಾಡಲಿದೆ.
ಭಾರತ ತಂಡದ ಬೌಲರ್ ಗಳು ಎರಡನೇ ಇನಿಂಗ್ಸ್ ನಲ್ಲೂ ಎಡವಿದರು. ಸ್ಪಿನ್ನರ್ ರವೀಂದ್ರ ಜಡೇಜಾ ಮಾತ್ರ 4 ವಿಕೆಟ್ ಗಮನ ಸೆಳೆದರು. ದಕ್ಷಿಣ ಆಫ್ರಿಕಾ ತಂಡದ ಸ್ಟಬ್ಸ್ 180 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 94 ರನ್ ಗಳಿಸಿದ್ದಾಗ ಜಡೇಜಾ ಎಸೆತದಲ್ಲಿ ಬೌಲ್ಡ್ ಆಗುತ್ತಿದ್ದಂತೆ ತಂಡ ಡಿಕ್ಲೇರ್ ಘೋಷಿಸಿತು.


