Menu

ಬಿಎಸ್ಸಿ ನರ್ಸಿಂಗ್‌ ಮಾಡಿ ಬನ್ನೂರು ಹೈವೇ ಬಳಿ ಭ್ರೂಣ ಲಿಂಗ ಪತ್ತೆ ದಂಧೆ ಆಸ್ಪತ್ರೆ ತೆರೆದಿದ್ದ ಶ್ಯಾಮಲಾ

ತಿ.ನರಸೀಪುರ ತಾಲೂಕಿನ ಬನ್ನೂರು ಹೈವೇ ಬಳಿಯ ಭ್ರೂಣ ಲಿಂಗ ಪರೀಕ್ಷೆ ಮತ್ತು ಹತ್ಯೆ ಕೇಂದ್ರ ಪತ್ತೆ ಪ್ರಕರಣದ ಮುಖ್ಯ ರೂವಾರಿ ಶ್ಯಾಮಲಾ ಬಿಎಸ್ಸಿ ನರ್ಸಿಂಗ್ ಓದು ಮುಗಿಸಿದ ಕೂಡಲೇ 15 ಬೆಡ್‌ಗಳ ಆಸ್ಪತ್ರೆ ಆರಂಭಿಸಿ ಅಲ್ಲಿ ಭ್ರೂಣ ಪರೀಕ್ಷೆ ಮತ್ತು ಹತ್ಯೆ ದಂಧೆ ನಡೆಸುತ್ತಿದ್ದಳು ಎಂಬ ವಿಚಾರ ತನಿಖೆಯಲ್ಲಿ  ತಿಳಿದು ಬಂದಿದೆ.

200ಕ್ಕೂ ಹೆಚ್ಚು ಭ್ರೂಣ ಪರೀಕ್ಷೆ ಈ ಆಸ್ಪತ್ರೆಯಲ್ಲಿ ನಡೆದಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಶ್ಯಾಮಲಾ ತಮ್ಮ ಗೋವಿಂದರಾಜು ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ. ಏಜೆಂಟ್ ಪುಟ್ಟರಾಜು ಮೂಲಕ ಗಿರಾಕಿಗಳನ್ನು ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆಸುತ್ತಿದ್ದ ಎಂಬುದು ಬಹಿರಂಗವಾಗಿದೆ.

ಬನ್ನೂರು ಹೈವೇ ಬಳಿಯ ಹುಣಗನಹಳ್ಳಿ ವ್ಯಾಪ್ತಿಯ ಫಾರಂ ಹೌಸ್ ಒಂದರಲ್ಲಿ ಲಿಂಗ ಭ್ರೂಣ ಪತ್ತೆ ಮಾಡಲಾಗುತ್ತಿತ್ತು. ಆರೋಗ್ಯಾಧಿಕಾರಿ ಮತ್ತು ಪೊಲೀಸ್‌ ದಾಳಿ ವೇಳೆ 4 ಗರ್ಭಿಣಿಯರು ಭ್ರೂಣ ಲಿಂಗ ಪತ್ತೆಗಾಗಿ ಬಂದಿದ್ದವರು ಇದ್ದರು. ಸ್ಕ್ಯಾನಿಂಗ್‌ಗೆ ಬಳಕೆ ಮಾಡುವ ಉಪಕರಣವೂ ಇತ್ತು. ಹೀಗಾಗಿ ಹೆರಿಗೆ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.

ಸಾಲಿಗ್ರಾಮ ತಾಲೂಕಿನ ಬೇರ್ಯ ಮೂಲದ ಶಿವಕುಮಾರ್, ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದ ಹರೀಶ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮಧ್ಯವರ್ತಿ ಪುಟ್ಟರಾಜು ಪರಾರಿಯಾಗಿದ್ದಾನೆ. ಒಟ್ಟು ಐವರನ್ನು ಬಂಧಿಸಲಾಗಿದೆ. ಆರೋಪಿಗಳು ಒಂದು ಭ್ರೂಣಪತ್ತೆಗೆ 25 ರಿಂದ 35 ಸಾವಿರ ಚಾರ್ಜ್ ಮಾಡುತ್ತಿದ್ದರು. ಆಸ್ಪತ್ರೆಯಿಂದ ಕಾರಿನಲ್ಲಿ ಸ್ಕ್ಯಾನಿಂಗ್ ಯಂತ್ರ ತಂದು ಭ್ರೂಣ ಪತ್ತೆ ಮಾಡಲಾಗುತ್ತಿತ್ತು. ಶ್ಯಾಮಲಾ ಮನೆಯಲ್ಲಿ ಕೂಡ ಸ್ಕ್ಯಾನಿಂಗ್ ಯಂತ್ರ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆದ ಜಾಗದಲ್ಲಿ ಎಷ್ಟು ದಿನಗಳಿಂದ ಭ್ರೂಣ ಪತ್ತೆ ನಡೆಯುತ್ತಿತ್ತು, ಎಷ್ಟು ಭ್ರೂಣ ಹತ್ಯೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

Related Posts

Leave a Reply

Your email address will not be published. Required fields are marked *