ಅಯೋಧ್ಯೆಯ ರಾಮಮಂದಿರ ದೇವಸ್ಥಾನ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಮಮಂದಿರದ ಗೋಪುರದ ಮೇಲೆ ಧ್ವಜಾರೋಹಣ ನೆರವೇರಿಸಿದರು.
22 ಅಡಿ ಎತ್ತರದ ಕೇಸರಿ ಧ್ವಜವನ್ನು ಹಾರಿಸಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಮೋದಿ ನಡೆಸಿದರು. ಪ್ರಧಾನಿಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಾಥ್ ನೀಡಿದರು.
ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಮ ದರ್ಬಾರ್ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗರ್ಭಗುಡಿಯಲ್ಲಿ ಆರತಿ ಬೆಳಗಿದರು. ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಧ್ವಜದ ವಿಶೇಷತೆ
ರಾಮಮಂದಿರದ ಮೇಲೆ ಹಾರಾಡುತ್ತಿರುವ ಧ್ವಜ ತುಂಬಾ ವಿಶೇಷವಾಗಿದ್ದು, ದೈವಿಕ ಧ್ವಜವನ್ನು ಗುಜರಾತ್ನ ಅಹಮದಾಬಾದ್ನಲ್ಲಿ ತಯಾರಿಸಲಾಗಿದೆ.
ಅಯೋಧ್ಯೆ ರಾಮ ಮಂದಿರದ ಧಾರ್ಮಿಕ ಧ್ವಜದಲ್ಲಿರುವ ಚಿಹ್ನೆಗಳಿಗೆ ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ. ಕೇಸರಿ ಬಣ್ಣದ ಧ್ವಜ, ಸೂರ್ಯ ದೇವರು ಮತ್ತು ಓಂ ಚಿಹ್ನೆ ಹೊಂದಿದೆ.
ಧಾರ್ಮಿಕ ಮಹತ್ವವುಳ್ಳ ವಿಶಿಷ್ಟವಾದ ಮರದ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಲಾಗಿದೆ.
ತಯಾರಿಸಲು 25 ದಿನಗಳು ಬೇಕಾಯಿತು. ಮೂರು ಪದರಗಳ ಬಟ್ಟೆಯಿಂದ ತಯಾರಿಸಲಾಗಿದೆ. ಇದರಲ್ಲಿ ಬಳಸಲಾದ ಪ್ರತಿಯೊಂದು ಅಂಶವೂ ಸ್ಥಳೀಯವಾಗಿದೆ.
ಅಂಚುಗಳನ್ನು ಗೋಲ್ಡನ್ ರೇಷ್ಮೆಯಿಂದ ಮಾಡಲಾಗಿದ್ದು, ಎಲ್ಲಾ ಚಿಹ್ನೆಗಳು ಕೈಯಿಂದ ಮಾಡಲಾಗಿದೆ. ಅವೆಲ್ಲವನ್ನೂ ಕೈಯಿಂದ ರಚಿಸಲು 7-8 ದಿನಗಳು ಬೇಕಾಯಿತು.


