ಬೆಂಗಳೂರು: “ಮಕ್ಕಳಲ್ಲಿ ಅಡಗಿರುವ ಸುಪ್ತ ಕಲ್ಪನಾ ಶಕ್ತಿಯನ್ನು ಹೊರತರಲು ಮತ್ತು ಅದನ್ನು ಪೋಷಿಸಲು ಚಿತ್ರಕಲಾ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಶಿಕ್ಷಣದಲ್ಲಿ ಅಕ್ಷರಗಳ ಕಲಿಕೆ ಎಷ್ಟು ಮುಖ್ಯವೋ, ಚಿತ್ರಕಲೆಯೂ ಅಷ್ಟೇ ಮಹತ್ವದ್ದಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿಯ ಎದುರು, ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ “2026ರ ಸಾಲಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಹಾಗೂ ಬೃಹತ್ ಚಿತ್ರಕಲಾ ಪ್ರದರ್ಶನ”ವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು, “ಕರ್ನಾಟಕ ರಾಜ್ಯಕ್ಕೆ ಕಲೆಯ ವಿಷಯದಲ್ಲಿ ಬಹಳ ದೊಡ್ಡ ಮಟ್ಟದ ಮೌಲ್ಯ ಹಾಗೂ ಇತಿಹಾಸವಿದೆ. ನಮ್ಮ ಈ ಪರಂಪರೆ ಮುಂದಿನ ಪೀಳಿಗೆಗೆ ತಲುಪಬೇಕಾದರೆ, ಶಾಲೆಗಳಲ್ಲಿ ಕಲೆಯನ್ನು ಹೇಳಿಕೊಡುವ ಶಿಕ್ಷಕರು ಬೇಕು. ನಮಗೆ ಸಾಮಾನ್ಯ ಶಿಕ್ಷಕರು, ದೈಹಿಕ ಶಿಕ್ಷಕರ ಜೊತೆಗೆ ಕಲಾ ಶಿಕ್ಷಕರೂ ಬೇಕಾಗಿದ್ದಾರೆ. ಆದ್ಯತೆಯ ಮೇರೆಗೆ ಆದಷ್ಟು ಬೇಗ ಶಿಕ್ಷಕರ ನೇಮಕಾತಿ ಮಾಡಲು ಮತ್ತು ಸಂಘದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ,” ಎಂದು ಹೇಳಿದರು.
ಗದಗ ಜಿಲ್ಲೆಯ ಶಿಕ್ಷಕರು ಸಂಘಟಿತರಾಗಿ ರಾಜಧಾನಿಯ ಶಕ್ತಿಕೇಂದ್ರದ ಬಳಿ ಇಂತಹ ಕಲಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದನ್ನು ಸಚಿವರು ಶ್ಲಾಘಿಸಿದರು.
“ನಿಮ್ಮಲ್ಲಿರುವ ಪ್ರತಿಭೆಯಿಂದ ನೀವು ಮುಂದುವರಿದ್ದೀರಿ, ಆದರೆ ಅದು ಮುಂದಿನ ಪೀಳಿಗೆಗೆ ಹೋಗಬೇಕಾದರೆ ನಿಮ್ಮಂತಹ ಗುರುಗಳು ಶಾಲೆಗಳಲ್ಲಿರಬೇಕು. ಇಂತಹ ಸೃಜನಶೀಲ ಪ್ರಯತ್ನಗಳು ಕೇವಲ ಒಂದು ಜಿಲ್ಲೆಗೆ ಸೀಮಿತವಾಗದೆ ರಾಜ್ಯದಾದ್ಯಂತ ವಿಸ್ತರಿಸಲಿ,” ಎಂದು ಆಶಿಸಿದರು.
ಪ್ರದರ್ಶನದಲ್ಲಿ ಶಿಕ್ಷಕರು ರಚಿಸಿದ ಕಲಾಕೃತಿಗಳು ನೋಡುಗರ ಮನ ಸೆಳೆದವು. ಪ್ರಕೃತಿ ಸೌಂದರ್ಯದ ಅನಾವರಣದ ಜೊತೆಗೆ, ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಂದೇಶ ಸಾರುವ ಅನೇಕ ಅರ್ಥಪೂರ್ಣ ಚಿತ್ರಗಳು ಪ್ರದರ್ಶನಗೊಂಡಿದ್ದವು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಶಾಸಕರಾದ ಎಸ್.ವಿ. ಸಂಕನೂರ, ಶಶಿಲ್ ಜಿ. ನಮೋಶಿ, ಶಾಸಕರಾದ ಭೀಮಣ್ಣ ಟಿ. ನಾಯ್ಕ್ ಹಾಗೂ ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಕಲಾವಿದರು ಉಪಸ್ಥಿತರಿದ್ದರು.


