ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಭೀಮಾತೀರದ ಹಂತಕ, ನಟೋರಿಯಸ್ ಎಂದೇ ಕುಖ್ಯಾತಿ ಪಡೆದಿರುವ ಬಾಗಪ್ಪ ಹರಿಜನ್‌ನನ್ನು ಗುಂಪೊಂದು ಬರ್ಬರವಾಗಿ ಕೊಚ್ಚಿ ಹಾಕಿದೆ. ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದ ದುಷ್ಕರ್ಮಿಗಳು ಮುಖ, ತಲೆ ಮಾರ್ಮಾಂಗ ಸೇರಿದಂತೆ ಮನಬಂದಂತೆ ಕೊಚ್ಚಿ ಹಾಕಿ ಪರಾರಿಯಾಗಿದ್ದಾರೆ.
ಭೀಮಾತೀರದ ಹಂತಕ ಚಂದಪ್ಪನ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್, ವಿಜಯಪುರ, ಭೀಮಾತೀರ, ಕಲಬುರಗಿ ಸೇರಿದಂತೆ ಸುತ್ತಲೂ ಹಾವಳಿ ನೀಡುತ್ತಿದ್ದ. 2018ರಲ್ಲೇ ಕೋರ್ಟ್ ಆವರಣದಲ್ಲಿ ಪೀರಪ್ಪ ಹಡಪದ್ ಎಂಬಾತ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆಸಿದ್ದ. ಆಗ ಸ್ವಲ್ಪದರಲ್ಲೇ ಪಾರಾಗಿದ್ದ. ಚಂದಪ್ಪ ಹರಿಜನ್ ಅಣ್ಣನಾಗಿರುವ ಯಲ್ಲಪ್ಪನ ಮಕ್ಕಳು ಈ ಸುಪಾರಿ ನೀಡಿದ್ದರು. ಹೀಗಾಗಿ ಈಗ ನಡೆದಿರುವ ಹತ್ಯೆ ಪ್ರಕರಣದ ಹಿಂದೆ ಯಲ್ಲಪ್ಪ ಹರಿಜನ್ ಕೈವಾಡವಿದೆ ಎಂಬ ಮಾತು ಕೇಳಿ ಬಂದಿವೆ.
ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ವಿಭಾಗದ ತಜ್ಞರ ಭೇಟಿ ನೀಡಿ ಪರಿಶೀಲಿಸಿದೆ. ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ರಾಮನಗೌಡ ಹಟ್ಟಿ ಕೂಡ ಆಗಮಿಸಿದ್ದರು.
ಹತ್ಯೆಯಾದ ಬಾಗಪ್ಪ ಹರಿಜನ್ ಗುರು ಚಂದಪ್ಪ ಹರಿಜನ್ 55 ಕೊಲೆ ಕೇಸ್’ಗಳ ಆರೋಪಿ. ಬಾಗಪ್ಪ ಚಿಕ್ಕ ವಯಸ್ಸಿನಲ್ಲೇ ಚಂದಪ್ಪನ ಗ್ಯಾಂಗ್ ಸೇರಿ ಆತನೊಂದಿಗಿದ್ದ. ಚಂದಪ್ಪ ಹರಿಜನ್ ಎನ್’ಕೌಂಟರ್ ಬಳಿಕ ಚಂದಪ್ಪನ 13 ಗನ್’ಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಅಣ್ಣ ಯಲ್ಲಪ್ಪ ಹಾಗೂ ಬಾಗಪ್ಪರ ನಡುವೆ ದ್ವೇಷ ಬೆಳೆಯಿತು. ಕಲಬುರ್ಗಿಯ ಜಮೀನು ವಿಚಾರದಲ್ಲೂ ವೈಮನಸ್ಸು ಬೆಳೆಯಿತು. ಇಲ್ಲಿಂದ ತಾನೇ ಚಂದಪ್ಪನ ಉತ್ತರಾಧಿಕಾರಿ ಎಂದು ಬಾಗಪ್ಪ ಹೇಳಿಕೊಳ್ಳಲಾರಂಭಿಸಿದ್ದ.
ಈ ವೈಮನಸ್ಸಿನಿಂದಲೇ ಬಾಗಪ್ಪನ ಇಬ್ಬರು ಅಳಿಯಂದಿರನ್ನು ಯಲ್ಲಪ್ಪ ಕೊಲೆ ಮಾಡಿ ಜೈಲು ಸೇರಿದ್ದ. 2013ರಲ್ಲಿ ಚಂದಪ್ಪನ ತಮ್ಮನ ಬಸವರಾಜನ ಕೊಲೆಯಾಗುತ್ತದೆ. ಈ ರೀತಿಯಾಗಿ ಇಬ್ಬರ ನಡುವೆಯೂ ದ್ವೇಷ ಬೆಳೆಯುತ್ತ ಹೋಗಿದೆ.