ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅದ್ಭುತ ಆಹಾರಗಳಲ್ಲಿ ನೆಲ್ಲಿಕಾಯಿಯೂ ಒಂದು. ಇದು ನೆಗಡಿ, ಕೆಮ್ಮು ಮತ್ತು ಇತರ ಶೀತ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳಷ್ಟು ಪ್ರಯೋಜನಕಾರಿ. ನೆಲ್ಲಿಕಾಯಿ ಒಳಗೊಂಡಿರುವ ವಿಟಮಿನ್ ಸಿ ಅಂಶವು ಚಳಿಗಾಲದಲ್ಲಿ ಬರುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ನೆರವಾಗುತ್ತದೆ.
ಚಳಿಗಾಲದಲ್ಲಿ ನೆಲ್ಲಿಕಾಯಿ ರಸಂ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕೂಡ ನಿಧಾನಕ್ಕೆ ಪರಿಹರಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಕಾಡುವ ಅಲರ್ಜಿ, ಶೀತಗಳನ್ನು ನಿಯಂತ್ರಿಸಲು ವಾರದಲ್ಲೊಮ್ಮೆಯಾದರೂ ನೆಲ್ಲಿಕಾಯಿ ರಸಂ ಸೇವನೆ ಉತ್ತಮ. ವಿಟಮಿನ್ ಎ, ಬಿ1, ಸಿ ಮತ್ತು ಇ ಹಾಗೂ ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೂಡ ನೆಲ್ಲಿಕಾಯಿಯಲ್ಲಿದೆ.
ನೆಲ್ಲಿಕಾಯಿ ರಸಂ ಮಾಡುವುದು ಹೇಗೆ
ಬೇಯಿಸಿದ ತೊಗರಿಬೇಳೆ, ಅರಿಶಿನ ಪುಡಿ, ಇಂಗು ಸೇರಿಸಿ. ಬೆಳ್ಳುಳ್ಳಿ, ಜೀರಿಗೆ,ಕರಿ ಮೆಣಸು, ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪನ್ನು ಸೇರಿಸಿ ರುಬ್ಬಿಕೊಳ್ಳಿ. ಕತ್ತರಿಸಿದ ನೆಲ್ಲಿಕಾಯಿ, ಸ್ವಲ್ಪ ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ ಬೇಯಿಸಿ ರುಬ್ಬಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ಎಣ್ಣೆಯಲ್ಲಿ ಸಾಸಿವೆ, ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ ಕುದಿದ ರಸಂಗೆ ಸೇರಿಸಿ. ಬಿಸಿಬಿಸಿಯಾಗಿ ಅನ್ನದೊಂದಿಗೆ ತಿನ್ನಲು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಹಿತವಾಗಿರುತ್ತದೆ.
ನೀವು ಬೇಳೆ, ಹುಣಸೆ ಸೇರಿಸದೆ ರಸಂ ಮಾಡಿ ಸೂಪ್ ಥರ ಕುಡಿಯುವುದಕ್ಕೂ ಚೆನ್ನಾಗಿರುತ್ತದೆ. ಆಗ ನೀವು ಮಸಾಲೆಯೊಂದಿಗೆ ನೆಲ್ಲಿಕಾಯಿ ಸೇರಿಇ ರುಬ್ಬಿಕೊಳ್ಳಿ. ಇದಲ್ಲದೆ ಬೆಳಗಿನ ಉಪಾಹಾರಕ್ಕೆ ನೆಲ್ಲಿಕಾಯಿ ಚಿತ್ರಾನ್ನ ಮಾಡಿ ತಿನ್ನುವುದು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಚಿತ್ರಾನ್ನ ಮಾಡಬೇಕಿದ್ದರೆ ನೆಲ್ಲಿಕಾಯಿ, ಹಸಿ ಮೆಣಸು, ಶುಂಠಿ, ಇಂಗು, ಅರಶಿಣ ಸೇರಿಸಿ ಚಟ್ನಿ ಹದಕ್ಕೆ ರುಬ್ಬಿಕೊಂಡು ಆ ಚಟ್ನಿಗೆ ಉಪ್ಪು ಸೇರಿಸಿ ನಿಮಗೆ ಬೇಕಾದ ಒಗ್ಗರಣೆ ಕೊಟ್ಟು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೇಯಿಸಿಟ್ಟ ಅನ್ನ ಸೇರಿಸಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪು ಉದುರಿಸಿ. ಇಷ್ಟವಿದ್ದವರು ರುಬ್ಬುವಾಗ ಚೂರು ಬೆಲ್ಲ ಸೇರಿಸಬಹುದು.


