ಬೆಂಗಳೂರು:ಮೈಸೂರಿನ ಮುಡಾ ಅಕ್ರಮ ನಿವೇಶನ ಹಂಚಿಕೆಯಲ್ಲಿ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲವೆಂದು ಲೋಕಾಯುಕ್ತ ಬಿ.ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಲಿದೆ.
ವಿಶೇಷ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರು ನೀಡಲಿರುವ ತೀರ್ಪು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟಂಬದವರ ಭವಿಷ್ಯ ನಿರ್ಧರಿಸಲಿದೆ.
ಒಂದು ವೇಳೆ ನ್ಯಾಯಾಲಯ ಲೋಕಾಯುಕ್ತ ತನಿಖಾ ವರದಿಯನ್ನು ಎತ್ತಿ ಹಿಡಿದರೆ, ಸಿದ್ದರಾಮಯ್ಯ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಗೆಲುವು ಸಿಗಲಿದೆ. ಒಂದು ವೇಳೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಲೋಕಾಯುಕ್ತ ವರದಿಯನ್ನು ತಿರಸ್ಕರಿಸಿದರೆ ಬಹುದೊಡ್ಡ ಕಾನೂನಿನ ಸಂಕಷ್ಟ ಎದುರಾಗಲಿದೆ. ಹೀಗಾಗಿ ಈ ತೀರ್ಪು ಕೇವಲ ಸಿದ್ದರಾಮಯ್ಯಗೆ ಮಾತ್ರವಲ್ಲದೆ, ರಾಜಕೀಯವ ವಲಯದಲ್ಲೂ ಹೆಚ್ಚಿನ ಮಹತ್ವ ಪಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬ ಸದಸ್ಯರ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‌ಗೆ ಇ.ಡಿ ಆಕ್ಷೇಪ ವ್ಯಕ್ತಪಡಿಸಿ, ವಿ.2ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿತ್ತು.
ಕಳೆದ ಬುಧವಾರ ವಿಚಾರಣೆ ವೇಳೆ ಇ.ಡಿ ತಕರಾರು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಲೋಕಾಯುಕ್ತ ಪೊಲೀಸರ ಪರ ವಕೀಲ ವೆಂಕಟೇಶ್ ಅರಬಟ್ಟಿ, ಇ.ಡಿ ಅರ್ಜಿಗೆ ಕಾನೂನಿನಲ್ಲಿ ಅವಕಾಶವಿಲ್ಲ, ಅರ್ಜಿಯಲ್ಲಿ ತನಿಖೆ ಬಗ್ಗೆ ಸ್ಪಷ್ಟತೆಯೂ ಇಲ್ಲ, ಲೋಕಾಯುಕ್ತ ಪೊಲೀಸರು ಇ.ಡಿಯು ಒಂದು ಪತ್ರ ಮತ್ತು 27 ದಾಖಲೆಗಳನ್ನು ನೀಡಿತ್ತು. ಲೋಕಾಯುಕ್ತ ತನಿಖಾಧಿಕಾರಿಯು ಈ ದಾಖಲೆಗಳನ್ನು ಪರಿಗಣಿಸಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ವಾದಿಸಿದ್ದರು.
ಇ.ಡಿ ಪತ್ರ, ದಾಖಲೆಗಳನ್ನು ಆರೋಪಪಟ್ಟಿಯ ಪುಟ ಸಂಖ್ಯೆ 646ರಲ್ಲಿ ಸಲ್ಲಿಸಲಾಗಿದೆ. ಅಲ್ಲದೇ ಲೋಕಾಯುಕ್ತ ತನಿಖಾಧಿಕಾರಿಯ ಅಭಿಪ್ರಾಯವನ್ನೂ ದಾಖಲಿಸಲಾಗಿದೆ. ಈಡಿ ಬಿ ರಿಪೋರ್ಟ್ ಪ್ರಶ್ನಿಸಲು ಅರ್ಪನಾದ ನೊಂದ ವ್ಯಕ್ತಿಯಲ್ಲ, ಇ.ಡಿಗೆ ಈ ರೀತಿಯ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ವೆಂಕಟೇಶ್ ಅಂಬಟ್ಟಿ ಅವರು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ್ದರು.