ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ.
ಉಳಿದ ಇನ್ನರ್ಧ ಕಾಮಗಾರಿಯೂ ನಿಗದಿತ ವೇಳೆ ಮುಗಿದರೆ 2026 ಅಂತ್ಯಕ್ಕೆ ಈ ಯೋಜನೆಯು ಪೂರ್ಣವಾಗಲಿದ್ದು,ಬರುವ. 2026 ಜೂನ್ ವೇಳೆಗೆ ಕೆಆರ್‌ಪುರಂ ಸಿಲ್ಕ್‌ಬೋರ್ಡ್ ನಡುವಿನ ಮಾರ್ಗ ಆರಂಭಿಸಲು ಸಿದ್ಧತೆ ನಡೆಸಲಾಗುತ್ತದೆ.
ಬೆಂಗಳೂರಿನಲ್ಲಿ ಉತ್ತರ ಭಾಗದಿಂದ ದಕ್ಷಿಣಕ್ಕೆ ಹಸಿರು ಮಾರ್ಗ, ಪೂರ್ವದಿಂದ ಪಶ್ಚಿಮಕ್ಕೆ ನೇರಳೆ ಮಾರ್ಗವು ಮೆಟ್ರೋ ಸಂಪರ್ಕ ಕಲ್ಪಿಸುತ್ತಿದೆ. ಮುಂದಿವರೆದು ದಕ್ಷಿಣ ಬೆಂಗಳೂರಿನಲ್ಲಿ ಹಳದಿ ಮಾರ್ಗ, ಬನ್ನೇರುಘಟ್ಟದಿಂದ ನಾಗಾವರ ನಡುವೆ ಗುಲಾಬಿ ಮಾರ್ಗ ಶೀಘ್ರದಲ್ಲಿಯೇ ಆರಂಭವಾಗುತ್ತಿದೆ.
ಇನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗಕ್ಕೆ ಪ್ರಯಾಣಿಕರು ಎದುರು ನೋಡುತ್ತಿದ್ದಾರೆ.ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋದ 58.19 ಕಿ.ಮೀ ವಿಸ್ತೀರ್ಣದ ನೀಲಿ ಮಾರ್ಗವನ್ನು 2 ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಮೊದಲನೇ ಹಂತ 2 ಎ ಇದು ಸಿಲ್ಕ್‌ಬೋರ್ಡ್‌ನಿಂದ ಕೆಆರ್ ಪುರಂಗೆ ಸಂಪರ್ಕ ಕಲ್ಪಿಸುತ್ತದೆ. 2 ಬಿ ಕೆಆರ್ ಪುರಂನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ಇದರಲ್ಲಿ ಒಟ್ಟು 31 ನಿಲ್ದಾಣಗಳಿರಲಿವೆ.
ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಸದ್ಯ ಹೆಚ್ಚು ಕಡಿಮೆ ಅರ್ಧದಷ್ಟು (ಶೇಕಡಾ 45) ಪೂರ್ಣವಾಗಿದೆ. ಸದ್ಯ ವಿಮಾನ ನಿಲ್ದಾಣದಿಂದ ಹೆಬ್ಬಾಳವರೆಗೂ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಉಳಿದಂತೆ ಹೆಬ್ಬಾಳದಿಂದ ಕೆಆರ್ ಪುರಂವರೆಗೂ, ಕೆಆರ್ ಪುರಂನಿಂದ ಸರ್ಜಾಪುರದವರೆಗೂ ನಡೆಯುತ್ತಿದೆ. ಮೊದಲಿಗೆ ಹೆಬ್ಬಾಳದಿಂದ ಏರ್‌ಪೋರ್ಟ್‌ಗೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಆರಂಭಿಸಬಹುದು ಎನ್ನಲಾಗಿದೆ.