ಲೈಂಗಿಕ ಸಮಸ್ಯೆಯ ಪರಿಹಾರಕ್ಕೆ ಆಯುರ್ವೇದ ಔಷಧಿ ನೀಡುವುದಾಗಿ ನಂಬಿಸಿ ಬೆಂಗಳೂರಿನ ಟೆಕ್ಕಿಗೆ ೪೮ ಲಕ್ಷ ರೂ. ವಂಚಿಸಿದ್ದ ನಕಲಿ ಗುರೂಜಿಯನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ಸಮಸ್ಯೆ ಸೇರಿದಂತೆ ನಾನಾ ಕಾಯಿಲೆಗಳಿಗೆ ಔಷಧಿ ನೀಡುವುದಾಗಿ ನಂಬಿಸಿ ಈ ಗುರೂಜಿ ಸಾರ್ವಜನಿಕರನ್ನು ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದು ತನಿಖೆ ವೇಳೆ ಬಯಲಾಗಿದೆ. ಬಂಧಿತ ಆರೋಪಿಯು ವಿಜಯ್ ಗುರೂಜಿ ಎಂದು ಗುರುತಿಕೋಮಡಿದ್ದು, ಆತನಿಗೆ ಸಹಕರಿಸುತ್ತಿದ್ದ ಸಹಚರನನ್ನು ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯು ರಸ್ತೆ ಬದಿ ಟೆಂಟ್ ಹಾಕಿಕೊಂಡು ಆಯುರ್ವೇದ ಔಷಧಗಳನ್ನು ಮಾರಾಟ ಮಾಡುತ್ತಿದ್ದ. ವಿಶೇಷವಾಗಿ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದವರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದ. ಪರಿಹಾರದ ಆಸೆಯಿಂದ ಬರುತ್ತಿದ್ದ ವರಿಗೆ ಮೂಲಿಕೆ ಹಾಗೂ ಪುಡಿಗಳ ರೂಪದಲ್ಲಿ ನಕಲಿ ಆಯುರ್ವೇದ ಔಷಧಿ ನೀಡಿ ವಂಚಿಸುತ್ತಿದ್ದ. ಐದು ಸಾವಿರ, ಹತ್ತು ಸಾವಿರ ಸಣ್ಣ ಮೊತ್ತದ ಹಣ ವಂಚನೆ ಮಾಡುತ್ತಿದ್ದರೂ ಮರ್ಯಾದೆಗೆ ಅಂಜಿ ಕೆಲವರು ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ.
ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿಯೊಬ್ಬರನ್ನು ಸಂಪರ್ಕಿಸಿ ಸಂಪೂರ್ಣ ಪರಿಹಾರ ನೀಡುವುದಾಗಿ ಭರವಸೆ ನೀಡಿ 48 ಲಕ್ಷ ರೂ. ವಂಚಿಸಿ ಪರಾರಿಯಾಗಿದ್ದ. ಟೆಕ್ಕಿ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈತ ರಾಜ್ಯದ ಹಲವು ಕಡೆ ಇದೇ ರೀತಿ ಜನರಿಗೆ ವಂಚಿಸಿರುವುದು ಗೊತ್ತಾಗಿದೆ.


