ಬೆಂಗಳೂರು: ಚಲಿಸುತ್ತಿರುವ ಲಾರಿಯ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ರಸ್ತೆ ಮದ್ಯೆ ದಗದಗನೇ ಹೊತ್ತಿ ಉರಿದ ಘಟನೆ ಪೀಣ್ಯದಾಸರಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಎಂಟನೇ ಮೈಲಿ ಬಳಿ ರಾಷ್ಟೀಯ ಹೆದ್ದಾರಿ ಪ್ಲೈಓವರ್ ನಲ್ಲಿ ತುಮಕೂರು ಕಡೆಯಿಂದ ಕೋಲಾರಕ್ಕೆ ಹೊರಟಿದ್ದ KA01AE4302 ಲಾರಿ ಇಂಜಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಏಕಾಏಕಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಲಾರಿ ಬೆಂಕಿಗಾಹುತಿ ಆಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಲಾರಿ ಚಾಲಕ ಇಂಜಿನ್ ಆಫ್ ಮಾಡಿ ಕೆಳಗಿಳಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಪ್ಕೈಓವರ್ ಮೇಲೆ ಟ್ರಾಫಿಕ್ ಜಾಮ್ ಆಗಿದ್ದರಿಂದ ಪೀಣ್ಯ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಡಬೇಕಾಯಿತು.
ಘಟನೆ ಸಂಬಂಧ ಪೀಣ್ಯ ಅಗ್ನಿಶಾಮಕ ಘಟಕದಿಂದ ಎರಡು ವಾಹನಗಳಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರಕರಣ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಘಟನೆಗೆ ಕಾರಣ ಹುಡುಕಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಚಿದಾನಂದ ಅವರು ತಿಳಿಸಿದ್ದಾರೆ.
ಇದೇ ವೇಳೆ ಅಗ್ನಿಶಾಮಕ ಠಾಣಾಧಿಕಾರಿ ಮಲ್ಲಿಕಾರ್ಜುನ ಝಳಕಿ ಮಾತನಾಡಿ ಎನ್ಎಚ್-4 ತುಮಕೂರು ಬೆಂಗಳೂರು ಹೈವೇ ಮೇಲೆ ಪ್ರಕ್ರಿಯೆ ಹಾಸ್ಪಿಟಲ್ ಹತ್ತಿರ ಪ್ಲೈಓವರ್ ಮೇಲೆ 12 ಚಕ್ರದ ಲಾರಿಗೆ ಬೆಂಕಿಯಾಗಿದೆ ಎಂದು ನಿಯಂತ್ರಣ ಕೊಠಡಿಗೆ ಕರೆ ಬಂದ ಕೂಡಲೇ ಪೀಣ್ಯ ಅಗ್ನಿಶಾಮಕ ಠಾಣೆ ಮತ್ತು ಯಶವಂತಪುರ ಅಗ್ನಿಶಾಮಕ ಠಾಣೆಯ ಎರಡು ಅಗ್ನಿಶಾಮಕ ವಾಹನದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ತೆರಳಿ ನೋಡಿದಾಗ ಫ್ಲೈಓವರ್ ಮೇಲೆ ಲಾರಿ ಗೆ ಬೆಂಕಿಯಾಗಿ ಉರಿಯುತ್ತಿದ್ದು ತಕ್ಷಣವೇ ಕಾರ್ಯಪ್ರವೃತರಾಗಿ ಕೇವಲ ಮೂರು ನಿಮಿಷದಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ತಿಳಿಸಿದರು.
ಈ ವೇಳೆ ಪೀಣ್ಯ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಾದ ವೀರಭದ್ರಯ್ಯ ರಾಜು, ಹೇಮಂತ್, ಪಕೀರಪ್ಪ, ಆಕಾಶ್, ವೆಂಕಟೇಶ್ ಮತ್ತು ಇತರರು ಇದ್ದರು.