ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಇಂದು (ಬುಧವಾರ) ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಆರಂಭಿಸಿದ್ದಾರೆ. ಎಂಟು ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಹಾಗೂ ಚಿಕ್ಕಮಗಳೂರು ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರವೀಂದ್ರ , ಬೆಳಗಾವಿ ಖಾನಾಪುರದ ತಹಶೀಲ್ದಾರ್ ಪ್ರಕಾಶ್ ಶ್ರೀಧರ್, ತುಮಕೂರಿನ ನಿವೃತ್ತ ಆರ್ಟಿಒ ಅಧಿಕಾರಿ ಎಸ್.ರಾಜು ಮನೆ ಮೇಲೆಯೂ ದಾಳಿ ನಡೆದಿದೆ.
ಗದಗ-ಬೆಟಗೇರಿ ನಗರಸಭೆ ಎಇಇ ಆರ್ಎಚ್ ಹುಚ್ಚೇಶ್ ಮನೆ ಮೇಲೆ ದಾಳಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮನೆ, ರಾಯಚೂರು ಜಿಲ್ಲೆಯ ಬೆಸ್ಕಾಂ ಜೆಇ ಹುಲಿರಾಜ್ ಮನೆ ಮೇಲೆಯೂ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ, ಅಕ್ರಮ ಹಣ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಲೋಕಾಯುಕ್ತ ತಂಡವು ದಾಳಿ ಕೈಗೊಂಡು ಸಂಬಂಧಿಸಿದ ದಾಖಲೆಗಳು , ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸುತ್ತಿದೆ.