“ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಬಿಜೆಪಿ ಸಂಸದರುಗಳು ಈ ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಎಲ್ಲಾದಕ್ಕೂ ಬಹಳ ವಿಚಿತ್ರವಾಗಿ ದನಿ ಎತ್ತುತ್ತಾರೆ. ಇದರ ಬಗ್ಗೆಯೂ ಮಾತನಾಡಲಿ” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕೇಳಿದಾಗ, “ಚರ್ಚೆ ನಡೆಸಲು ಕೇಂದ್ರ ಸರ್ಕಾರಕ್ಕೆ ಏಕೆ ಭಯ. ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಸಂಸತ್ ಅಧಿವೇಶನದಲ್ಲಿ ಈ ವಿಚಾರವನ್ನ ಕೇಂದ್ರ ಸರ್ಕಾರ ಚರ್ಚೆ ಮಾಡಬೇಕು. ಈ ವಿಚಾರ ಚರ್ಚೆ ನಡೆಸಲು ಇವತ್ತಿನ ತನಕ ಅವಕಾಶ ನೀಡುತ್ತಿಲ್ಲ. ಆದ ಕಾರಣಕ್ಕೆ ಇಂಡಿಯಾ ಒಕ್ಕೂಟದ ಪ್ರತಿನಿಧಿಗಳು ಪ್ರತಿಭಟನೆ ಮಾಡುತ್ತಿದ್ದಾರೆ” ಎಂದರು.
“ಹೋಟೆಲ್ ಹಾಗೂ ಇತರೇ ಉದ್ದಿಮೆಗಳು ಇದರಿಂದ ತೊಂದರೆಗೆ ಒಳಗಾಗಿವೆ. ಇದರ ಬಗ್ಗೆ ನಾವು ದನಿ ಎತ್ತಬೇಕಿರುವುದು ನಮ್ಮ ಕರ್ತವ್ಯ. ಕೋಟ್ಯಂತರ ಮಹಿಳೆಯರ ಮೇಲೆ ಇದು ಪರಿಣಾಮ ಬೀರಿದೆ. ಯುದ್ದದ ಪರಿಣಾಮವಾಗಿ ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಭಾರತೀಯ ಉದ್ಯಮಿಗಳು, ಕೆಲಸಗಾರರ ಮೇಲೆ ಪರಿಣಾಮ ಬೀರಿದೆ” ಎಂದು ಹೇಳಿದರು.
“ದೇವೇಗೌಡರು ಮೇಕೆದಾಟು, ಎತ್ತಿನಹೊಳೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಮಾತನಾಡುವಂತೆ ಹೇಳಲಿ. ಈ ವಯಸ್ಸಿನಲ್ಲಿ ಅವರ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ನನಗೆ ಇಷ್ಟವೂ ಇಲ್ಲ. ಈ ವಯಸ್ಸಿನಲ್ಲಿ ಮನಸ್ಸು ನೋಯಿಸುವುದು ಬೇಡ ಎಂದುಕೊಂಡಿರುವೆ. ಅವರೇ ಇವುಗಳಿಗೆ ಪರಿಹಾರ ಸೂಚಿಸಲಿ. ಅದೇ ರೀತಿ ಅವರ ಪಕ್ಷದ ಸದಸ್ಯರುಗಳಿಗೆ ವಿಧಾನಸಭೆಯಲ್ಲಿ ಮಾತನಾಡಲು ಹೇಳಲಿ. ಆಗ ನಾನು ನಮ್ಮ ಕಾಲದಲ್ಲಿ ಏನೇನು ಆಗಿದೆ ಎಂದು ಹೇಳುತ್ತೇನೆ” ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿರುವ ಬಗ್ಗೆ ಕೇಳಿದಾಗ, “ಶಾಸಕರಿಗೆ ಹಾಗೂ ಬೆಂಗಳೂರಿನಲ್ಲಿರುವ ಎಐಸಿಸಿ ಕಾರ್ಯದರ್ಶಿಗಳಿಗೆ, ಸಂಸದರಿಗೆ ಔತಣಕೂಟ ಏರ್ಪಡಿಸಲಾಗಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗಿನ ಪ್ರಯಾಣವನ್ನ ಪ್ರತ್ಯೇಕ ಮಾಧ್ಯಮಗೋಷ್ಟಿ ನಡೆಸಿ ವಿವರಿಸುತ್ತೇನೆ” ಎಂದು ಉತ್ತರಿಸಿದರು.


