ಚಿಕ್ಕಮಗಳೂರು ಮುಳ್ಳಯ್ಯನಗಿರಿ ಪ್ರವಾಸಕ್ಕೆ ಬಂದಿದ್ದ 40 ಜನರ ತಂಡದಲ್ಲಿದ್ದ ಕೇರಳದ 16 ವರ್ಷದ ವಿದ್ಯಾರ್ಥಿನಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಾಪತ್ತೆಯಾಗಿದ್ದಾಳೆ.
10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದನ ನಾಪತ್ತೆಯಾಗಿರುವಾಕೆ. ಕೇರಳದಿಂದ ಬಂದಿದ್ದ 40 ಜನರ ತಂಡ ಮಂಗಳವಾರ ಸಂಜೆ ಚಂದ್ರದ್ರೋಣ ಸಾಲಿನಲ್ಲಿ ವೀಕ್ಷಣೆಗೆ ತೆರಳಿದ್ದರು. ಕತ್ತಲಾದಾಗ ಶ್ರೀನಂದನ ನಾಪತ್ತೆಯಾಗಿದ್ದಾಳೆ. ಜೊತೆಗಿದ್ದವರು ಹುಡುಕಾಡಿದರೂ ಪತ್ತೆಯಾಗಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದ 30ಕ್ಕೂ ಹೆಚ್ಚು ಸಿಬ್ಬಂದಿ ಟಾರ್ಚ್ ಹಾಕಿಕೊಂಡು ಮಧ್ಯರಾತ್ರಿವರೆಗೂ ಹುಡುಕಾಡಿದರೂ ಸುಳಿವು ಸಿಕ್ಕಿಲ್ಲ. ಬೆಟ್ಟಗುಡ್ಡಗಳ ಕಾಡಿನ ಪ್ರದೇಶ, ಮಂಜು ಹಾಗೂ ಕತ್ತಲು ಕವಿದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಸ್ಥಳಕ್ಕೆ ಎಎಸ್ಪಿ ಜಯಕುಮಾರ್ ಭೇಟಿ ನೀಡಿದ್ದರು.
ಬೆಳಗ್ಗೆ 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಡ್ರೋನ್ ಮೂಲಕ ಬಾಲಕಿಯ ಪತ್ತೆಗೆ ಮುಂದಾಗಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ (36) 4 ದಿನಗಳ ಶೋಧದ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಅರಣ್ಯ ಪ್ರದೇಶದೊಳಗೆ ದಾರಿ ತಪ್ಪಿದ್ದ ಅವರು, ನೀರು ಕುಡಿದು ಪಾಳು ಬಿದ್ದ ಬಂಗಲೆಯಲ್ಲಿ ಆಶ್ರಯ ಪಡೆದಿದ್ದರು.


