ಬಿಜೆಪಿಯಲ್ಲಿ ಇತ್ತೀಚಿನ ಬೆಳವಣಿಗೆಗಳು ತಳಮಟ್ಟದ ಕಾರ್ಯಕರ್ತರಿಗೆ ತೀವ್ರ ಮುಜುಗರ ಉಂಟು ಮಾಡುತ್ತಿರುವುದು ಸುಳ್ಳಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಬೇಕಾದವರು ಹಾದಿಬೀದಿಯಲ್ಲಿ ಮಾತನಾಡುವುದು ಕಂಡಾಗ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದು ಸತ್ಯ.
ಸಮಸ್ಯೆ ಬಗೆಹರಿಸಬೇಕಾದ ಹೈಕಮಾಂಡ್ ನಾಯಕರ ಕಾದು ನೋಡುವ ತಂತ್ರಕ್ಕೆ ರಾಜ್ಯ ಬಿಜೆಪಿ ಹೈರಾಣಾಗಿ ಹೋಗುತ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಇತ್ತೀಚಿನ ಬೆಳವಣಿಗೆಗಳು ಅತ್ತ ಉಗುಳಲೂ ಆಗದೇ ಇತ್ತ ಜೀರ್ಣಿಸಿಕೊಳ್ಳಲು ಆಗದ ಸ್ಥಿತಿ. ಇದು ಬೇರೆ ಯಾವುದೇ ಪಕ್ಷದಲ್ಲಿ ಆಗಿದ್ದರೆ, ಎಲ್ಲವನ್ನೂ ಒಪ್ಪಿಕೊಳ್ಳಬಹುದು. ಆದರೆ ಕೇಡರ್ ಬೇಸ್ ಕಾರ್ಯಕರ್ತರ ಆಧಾರಿತ ಪಕ್ಷ ಬಿಜೆಪಿ ಇಂತಹ ಅಶಿಸ್ತನ್ನು ಹಿಂದೆಂದೂ ಒಪ್ಪಿಕೊಂಡದ್ದೂ ಇಲ್ಲ, ಅಪ್ಪಿಕೊಂಡದ್ದು ಇಲ್ಲ. ಮನೆಯೊಂದು ಮೂರು ಬಾಗಿಲಂತಾದ ಪಕ್ಷದಲ್ಲಿ ಒಡೆದ ಮನಸ್ಸನ್ನು ಸರಿ ಪಡಿಸಬೇಕಾದವರು ಯಾರು?
ಬಿಜೆಪಿ ನಾಯಕರ ಇತ್ತೀಚಿನ ವರ್ತನೆಗಳು ತಳಮಟ್ಟದ ಕಾರ್ಯಕರ್ತರ ನೈತಿಕ ಸ್ಥೆ ರ್ಯ ಕುಸಿಯುವಂತೆ ಮಾಡಿವೆ. ರಾಜ್ಯ ಬಿಜೆಪಿ ಘಟಕದಲ್ಲಿ ತಲೆ ಎತ್ತಿರುವ ಮೂರು ನಾಲ್ಕು ಬಣಗಳ ವರ್ತನೆಯ ಬಗ್ಗೆ ಧ್ವನಿ ಎತ್ತದಂತಹ ಸ್ಥಿತಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಂದನೆ. ಈ ಹಿಂದೆ ಪಕ್ಷದಲ್ಲಿ ಇಂತಹ ಅಶಿಸ್ತು ಕಂಡು ಬಂದಾಗಲೆ ಸಂಘದ ಉನ್ನತ ನಾಯಕರು, ಹಿರಿಯರು ನಾಲ್ಕು ಗೋಡೆಯ ಮಧ್ಯೆ ಕುಳಿತು ಮಾತನಾಡಿ ಶಿಸ್ತಿನ ಪಾಠ ಕಲಿಸಿ ಪಕ್ಷದಲ್ಲಿ ಸಮನ್ವಯ ಸಾಧಿಸುವ, ಒಮ್ಮತ ಮೂಡಿಸುವ ಕಾರ್ಯ ಮಾಡುತ್ತಿದ್ದರು. ಆದರೆ, ಇದೀಗ ಪಕ್ಷದಲ್ಲಿ ಕೆಲ ಹಿರಿಯರನ್ನು ಹೊರತುಪಡಿಸಿದರೆ ಆರೆಸ್ಸೆಸ್ಸ್ ಮೂಲದಿಂದ ಬಂದ ನಾಯಕರು ಕಾಣುವುದು ಬಹಳ ಅಪರೂಪ. ಸಂಘವನ್ನು ಕ್ಯಾರೇ ಮಾಡದ ಮಟ್ಟಿಗೆ, ಬೈಠಕ್ ಮುಗಿಸಿ ಹೊರಬಂದಾಗ ಸಂಘದ ಹಾಗೂ ಪಕ್ಷದ ಹಿರಿಯರ ಬಗ್ಗೆ ಬೆನ್ನ ಹಿಂದೆ ಬೇರೆಯೇ ಮಾತನಾಡುವವರು ಪಕ್ಷದಲ್ಲಿ ಶಿಸ್ತನ್ನು ಹೊಂದಲು ಸಾಧ್ಯವಿದೆಯೇ?
ಬಿಜೆಪಿ ಪಕ್ಷ ಅಂದರೇನು? ಇದರ ಬೆಳವಣಿಗೆಯ ಹಿಂದೆ ಎಷ್ಟು ಕಾರ್ಯಕರ್ತರ ತ್ಯಾಗ, ಪರಿಶ್ರಮ ಅಡಕವಾಗಿವೆ? ಪಕ್ಷಕ್ಕೆ ದುಡಿದ ಎಷ್ಟು ಪ್ರಾಮಾಣಿಕ ಹಿರಿಯ, ಕಿರಿಯ ಕಾರ್ಯಕರ್ತರಿಗೆ ಇತ್ತೀಚಿನ ದಿನಗಳಲ್ಲಿ ಗೌರವ, ಮಾನ್ಯತೆ ಸಿಗುತ್ತಿದೆ? ತಳಮಟ್ಟದ ಕಾರ್ಯಕರ್ತರ ಭಾವನೆಗಳಿಗೆ ಅದೆಷ್ಟು ಬೆಲೆ ಸಿಗುತ್ತಿದೆ? ಪಕ್ಷದಲ್ಲಿ ಎಷ್ಟು ಮಂದಿ ನಿಷ್ಠಾವಂತರಿಗೆ, ಪ್ರಾಮಾಣಿಕವಾಗಿ ದುಡಿದವರಿಗೆ ಈ ಬಾರಿ ಜವಾಬ್ದಾರಿ ನೀಡಲಾಗಿದೆ? ಅನ್ಯಪಕ್ಷದಿಂದ ಬಂದ ವಲಸಿಗರಿಗೆ ಸಿಗುವ ಗೌರವ, ಪದವಿ, ಸ್ಥಾನಗಳು ಮೂಲಕಾರ್ಯಕರ್ತರಿಗೆ ಸಿಗುತ್ತಿದೆಯೇ? ಈ ಹಿಂದಿನ ಚುನಾವಣೆಗಳಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ದೊರೆತ ಮಾನ್ಯತೆಯಿಂದ ಮೂಲ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗುವುದಿಲ್ಲವೇ? ಪಕ್ಷಕ್ಕೆ ಸಂಘಟನೆಗೆ ಹಾದಿಬೀದಿಯಲ್ಲಿ ವಾಚಾಮಗೋಚರ ನಿಂದಿಸಿದವರನ್ನು ಪಕ್ಷಕ್ಕೆ ಎಳೆತಂದು ರಾಜಮರ್ಯಾದೆ ನೀಡುವ ಇತ್ತೀಚಿನ ಪಕ್ಷದ ಬೆಳವಣಿಗೆಯ ಬಗ್ಗೆ ಮೂಲಕಾರ್ಯಕರ್ತರ ನೋವನ್ನು ನಾಯಕರು ಅರಿತಿದ್ದಾರೆಯೇ?
ಹೀಗೆ ಪಕ್ಷದೊಳಗಿನ ವ್ಯತ್ಯಾಸಗಳ ಬಗ್ಗೆ ಹತ್ತಾರು ಪ್ರಶ್ನೆ, ನೋವುಗಳು ಕಾರ್ಯಕರ್ತರ ವಲಯದಲ್ಲಿದೆ. ಪ್ರಮುಖ ನಿರ್ಧಾರ ಕೈಗೊಳ್ಳಲು, ಪಕ್ಷದೊಳಗಿನ ಗೊಂದಲ ನಿವಾರಣೆಗೆ ರಾಜ್ಯದಲ್ಲಿ ಕೋರ್ ಕಮಿಟಿ ರಚಿಸಲಾಗಿದ್ದರೂ ಇದರಲ್ಲಿ ಯಾವುದೇ ಒಬ್ಬ ನಾಯಕನ ಹಿಂಬಾಲಕರಿಗೆ ಸ್ಥಾನ ದೊರಕದೇ ಪಕ್ಷ ಹಿರಿಯ ಕಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಾಧ್ಯಕ್ಷರು, ಮಾಜಿ ಉಪಮುಖ್ಯಮಂತ್ರಿಗಳು, ಮೇಲ್ಮನೆ, ಕೆಳಮನೆ ಪ್ರತಿಪಕ್ಷ ನಾಯಕರು ಹಾಗೂ ಸಾಮಾಜಿಕ ನ್ಯಾಯದಡಿ, ಸಂಘಟನೆಯ ಹಿನ್ನೆಲೆಯ ಹಾಗೂ ಪಕ್ಷದ ಸಂಘಟನಾತ್ಮಕ ಹಿನ್ನೆಲೆಯ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದ ನಾಯಕರನ್ನು ಕೇಂದ್ರದ ವರಿಷ್ಠರೇ ಆಯ್ಕೆ ಮಾಡಬೇಕಾದ ಅನಿವಾರ್ಯತೆಯಿದೆ.
ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಈ ಕೋರ್ ಕಮಿಟಿ ತೆಗೆದುಕೊಳ್ಳುವ ಒಮ್ಮತದ ನಿರ್ಧಾರಗಳೇ ಅಂತಿಮವಾಗಬೇಕು. ಯಾವುದೇ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೂ ಈ ಕೋರ್ ಕಮಿಟಿ ತೀರ್ಮಾನಗಳಿಗೆ ಹೆಚ್ಚಿನ ಮಹತ್ವ ದೊರಕಿ, ಯಾವುದೇ ವ್ಯಕ್ತಿಗತ ನಾಯಕನ ಏಕಪಕ್ಷೀಯ ತೀರ್ಮಾನಗಳು ಪಕ್ಷದಲ್ಲಿ ಅಂತಿಮವಾಗದೇ ಸಾಮೂಹಿಕ ನಾಯಕತ್ವದ ಪರಿಕಲ್ಪನೆಯ ಜೊತೆಗೆ ಪಕ್ಷದ ವಿವಿಧ ಕಾರ್ಯಕ್ರಮಗಳು, ರಾಜ್ಯಾದ್ಯಂತ ಹೋರಾಟ, ವಿವಿಧ ಕಾರ್ಯಕ್ರಮಗಳಿಗೆ ಸಂಚಾಲಕ, ಸಹಸಂಚಾಲಕರ ನೇಮಕದ ಸಂದರ್ಭಗಳಲ್ಲಿ ಕೂಡ ಒಂದು ಬಣಕ್ಕೆ, ಒಂದು ಜಾತಿ, ಸಮುದಾಯಕ್ಕೆ, ಹಿಂಬಾಲಕರಿಗೆ ಪ್ರಾಶಸ್ತ್ಯ ನೀಡುವುದು ಮಾಡಬಾರದು. ಅದು ಪಕ್ಷದಲ್ಲಿನ ಸಾಮೂಹಿಕ ನಡೆಗೆ, ಸಾಮೂಹಿಕ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಎದ್ದಿರುವ ಅಪಸ್ವರಗಳಿಗೆ ಮೂಲಕಾರಣ ಇದೇ ಆಗಿದೆ.
ಬಿಜೆಪಿಯ ಇತ್ತೀಚಿನ ಸ್ಥಿತಿ ಯಾವ ಮಟ್ಟದಲ್ಲಿದೆಯೆಂದರೆ ಕಳೆದೊಂದು ದಶಕಗಳ ಹಿಂದೆ ಕಾಂಗ್ರೆಸ್ ಪರಿಸ್ಥಿತಿಯೂ ಇದೇ ಆಗಿತ್ತು. ಹತ್ತಾರು ಬಣಗಳು, ನೂರಾರು ಪ್ರಭಾವಿ ನಾಯಕರ ಗುಂಪುಗಳು ಪಕ್ಷದಲ್ಲಿ ಅರಾಜಕತೆ ಸೃಷ್ಟಿಸಿತು. ಇದೀಗ ಅದಕ್ಕಿಂತಲೂ ಭಿನ್ನವಾದ, ಶೋಚನೀಯ ಸ್ಥಿತಿ ಬಿಜೆಪಿಗೆ ಅಂಟಿದೆ. ಕೇವಲ ಪಕ್ಷದಲ್ಲಿ ಇಂತಹ ಗೊಂದಲ, ಗುಂಪುಗಾರಿಕೆ ರಾಜ್ಯಮಟ್ಟದ ನಾಯಕರ ಮಧ್ಯೆ ಮಾತ್ರ ಸೀಮಿತವಾಗದೆ, ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿಯೂ ಸ್ಪಷ್ಟವಾಗಿ ಎರಡು ಬಣಗಳು ಮುಸುಕಿನ ಗುದ್ದಾಟದ ಮೂಲಕ ಕಿತ್ತಾಡಿಕೊಳ್ಳುತ್ತಿವೆ. ಈ ಕಿತ್ತಾಟಗಳು ಪಕ್ಷದ ಶಾಸಕರಿರುವ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆ ಉಂಟು ಮಾಡದಿದ್ದರೂ, ಸೋತ ಕ್ಷೇತ್ರಗಳಲ್ಲಿ ಸಂಘಟನೆ ಕ್ಷೀಣಿಸುವಂತೆ ಮಾಡಿದೆ. ಪಕ್ಷದ ಸದಸ್ಯತ್ವ ಸೇರಿದಂತೆ ಸಂಘಟನೆಗೆ ಪೂರಕವಾಗಿ ಹತ್ತಾರು ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲು ಕಾರ್ಯಕಾರಿಣಿ ಸಭೆಗಳು, ಕೋರ್ ಕಮಿಟಿ ಸಭೆಗಳೇ ಬಹಳ ಅಪರೂಪ ಎಂಬಂತಿದೆ.
ಕೋರ್ ಕಮಿಟಿ, ಕಾರ್ಯಕಾರಿಣಿಯಲ್ಲಿ ಕೈಗೊಂಡ ತೀರ್ಮಾನಗಳು ಬೂತ್ ಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕಾದರೆ ಈ ಪ್ರಕ್ರಿಯೆಗಳು ಯಶಸ್ವಿಯಾಗಬೇಕು. ಪಕ್ಷದಲ್ಲಿದ್ದು ಪಕ್ಷದ ವಿರುದ್ಧವೇ ಮಾತನಾಡಿದವರ ಬಗ್ಗೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ನಿರ್ಣಯಗಳಾಗಿದ್ದರೂ, ಅಂತಹವರ ಬಗ್ಗೆ ಮೃದುಧೋರಣೆ ತಾಳುತ್ತಿರುವುದು ಹೊಂದಾಣಿಕೆ ರಾಜಕಾರಣದ ಬಗ್ಗೆ ಪುಷ್ಠೀಕರಿಸುತ್ತಿದೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಸಂಘಟನೆಯ ಕಾರ್ಯ ಮಾಡಲಾಗುತ್ತಿಲ್ಲ ಹಾಗೂ ಕೆಲವೊಂದು ಕಾರಣಗಳಿಂದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಬ್ಬರೂ ರಾಜೀನಾಮೆ ಇಂಗಿತ ವ್ಯಕ್ತಪಡಿಸಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸಿಕೊಡುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಟ್ಟು ಹಾಕಿದ ಪಕ್ಷ ಬಿಜೆಪಿಯಲ್ಲಿ ಒಂದು ಅಲಿಖಿತ ನಿಯಮವಿದೆ. ವ್ಯಕ್ತಿಗಿಂತ ಪಕ್ಷದೊಡ್ದದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬುದು. ಪಕ್ಷದಲ್ಲಿ ವ್ಯಕ್ತಿ ಯಾವತ್ತೂ ಪರಿಪೂರ್ಣನಲ್ಲ. ಪಕ್ಷ ತತ್ವದ ಆಧಾರದಲ್ಲಿ ಕೆಲಸ ನಿರ್ವಹಿಸುವಂತದ್ದು. ಇಲ್ಲಿ ಸಂಘಟನೆ ನಿಂತ ನೀರಾಗದೇ ಸದಾ ಹರಿಯುವ ನದಿಯಾಗಬೇಕು. ಇಂತಹ ಚಿಂತನೆಯಲ್ಲಿ ಬೆಳೆದ ಪಕ್ಷದಲ್ಲಿ ಇಂದು ತತ್ವಕ್ಕಿಂತ ಕೇವಲ ವ್ಯಕ್ತಿಯೇ ಶ್ರೇಷ್ಠನಾಗಿ ವ್ಯಕ್ತಿ ಹಿಂಬಾಲಕರೇ ಪಕ್ಷದಲ್ಲಿ ತುಂಬಿ ತುಳುಕುವುದು ಹಾಗೂ ಆ ವ್ಯಕ್ತಿಗೆ ಸೀಮಿತವಾಗಿ ಪದಾಧಿಕಾರಿಗಳು ಕಾರ್ಯ ಮಾಡುವುದು, ಹೋದಲ್ಲಿ ಬಂದಲ್ಲಿ ಬ್ಯಾಕ್ ಸೀಟ್ ಡ್ರೈವರ್ಗಳಾಗಿ ಪಕ್ಷದ ಚಟವಟಿಕೆಗಳಿಗೆ ಅನವಶ್ಯಕ ಮೂಗು ತೂರಿಸುವ ಪರಿಣಾಮ ಹಾಗೂ ಪಕ್ಷದ ಗಂಧಗಾಳಿಯೇ ಗೊತ್ತಿಲ್ಲದ ಎ ವ್ಯವಹಾರ, ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಗಳನ್ನು ಹಾಗೂ ನಾಯಕರ ಆತ್ಮೀಯತೆ, ಮಿತ್ರನ ನೆಲೆಯಲ್ಲಿ ಪಕ್ಷದ ಜವಾಬ್ದಾರಿ ನೀಡುವ ಪ್ರವೃತ್ತಿ ಪಕ್ಷದಲ್ಲಿ ಕೊನೆಯಾಗಬೇಕು.
ಈ ಹಿಂದೆ ಬಿಜೆಪಿಯಲ್ಲಿ ಗೊಂದಲ ಭಿನ್ನಾಭಿಪ್ರಾಯಗಳೇ ಏರ್ಪಟ್ಟಿಲ್ಲವೆಂದೇನಲ್ಲ. ಯಡಿಯೂರಪ್ಪ ಹಾಗೂ ಅನಂತಕುಮಾರ್ ಮಧ್ಯೆ ಶೀತಲ ಸಮರವೇ ಏರ್ಪಟ್ಟಂತಹ ಹಲವಾರು ಉದಾಹರಣೆಗಳಿವೆ. ಆ ಭಿನ್ನಾಭಿಪ್ರಾಯಗಳಿಗೆ ಒಂದು ಅರ್ಥವೂ ಇತ್ತು. ಅಂದು ಕಾರ್ಯಕರ್ತ ಪರವಾದ ಅಥವಾ ಸಿದ್ಧಾಂತದ ಪರವಾದ ಆಗ್ರಹವೂ ಇತ್ತು. ಈ ಕಾರಣಕ್ಕಾಗಿ ಸಂಘದ ಹಿರಿಯ ನಾಯಕರು ಕೇಶವ ಕೃಪಾದ ನಾಲ್ಕು ಗೋಡೆಗಳ ಮಧ್ಯೆ ಎಲ್ಲವನ್ನೂ ಸರಿಪಡಿಸಿ ಸಂಘಟನೆ ಹಾಗೂ ಕಾರ್ಯಕ್ಕೆ ಮಾತ್ರ ಆಗಾಗ್ಗೆ ಪ್ರಚೋದನೆ ನೀಡುವ ಪರಿಪಾಠಗಳಿತ್ತು. ಬಿಜೆಪಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಂಘದ ನಾಯಕರಿಗೆ ವಿಚಾರಗಳು ತಲುಪಿಲ್ಲವೆಂದೆನಲ್ಲ. ಆದರೆ, ತತ್ವ, ಸಿದ್ಧಾಂತ, ವೈಚಾರಿಕತೆ ಮೀರಿ ಪಕ್ಷದ ನಾಯಕರು ತಳೆದಿರುವ ಧೋರಣೆ ಸಂಘ ಹಾಗೂ ವಿವಿಧ ಕ್ಷೇತ್ರದ ಕಾರ್ಯಗಳಿಗೆ ತೊಡಕುಂಟು ಮಾಡುತ್ತಿದೆ.
ಈ ಬೆಳವಣಿಗೆಗಳ ಪರಿಣಾಮ ಅನುಭವಿಸುವವನು ಮಾತ್ರ ಬೂತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತ. ಪಕ್ಷದ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಆತನಿಗೆ ಮೊದಲು ಕೇಳಿ ಬರುವ ಪ್ರಶ್ನೆಯೆಂದರೆ ನಾಯಕರ ಕಚ್ಚಾಟದ ಕುರಿತಾದದ್ದು. ಸಿದ್ಧಾಂತವನ್ನೇ ಮರೆತು ಹಣ, ಅಧಿಕಾರ, ಜಾತಿ, ಒಳಜಗಳ, ವಂಶಕ್ಕೆ ಜೋತು ಬೀಳುವ ಈಗಿನ ನಾಯಕರ ವರ್ತನೆಯ ಕುರಿತಾದ ಬಹುದೊಡ್ಡ ಆಕ್ರೋಶ ಕಾರ್ಯಕರ್ತರ ವಲಯದಲ್ಲಿದೆ. ಇಷ್ಟೆ ಹಾದಿ ಬೀದಿ ರಂಪಾಟ, ಕೀಳು ಪದಗಳು ಪರಸ್ಪರ ಬಳಕೆಯಾಗುತ್ತಿದ್ದರೂ ಕೇಂದ್ರದ ಹೈಕಮಾಂಡ್ ಏಕೆ ಇದಕ್ಕೊಂದು ತಾರ್ಕಿಕ ಅಂತ್ಯ ಒದಗಿಸುತ್ತಿಲ್ಲ ಎಂಬುದು ಕಾರ್ಯಕರ್ತರ ಪ್ರಶ್ನೆ. ಈ ಗೊಂದಲಕ್ಕೆ ಉದ್ಭವಕ್ಕೆ ಕಾರಣಗಳೇನು? ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಲವಾರು ಮಂದಿ ಜವಾಬ್ದಾರಿ ನಿರ್ವಹಿಸಿದ್ದರೂ ಇಂತಹ ರಂಪಾಟಗಳು ಪಕ್ಷದಲ್ಲಿ ಕಂಡು ಬಂದಿದ್ದು ಬಹಳ ಕಡಿಮೆ. ಎಲ್ಲಿ ವ್ಯತ್ಯಾಸಗಳಾಗಿವೆ ಎಂಬುದು ಹಾಗೂ ಯಾವ ಬಣ, ಯಾರಿಂದ ಪಕ್ಷಕ್ಕೆ ತೊಡಕಾಗಿದೆ ಎಂಬ ಬಗ್ಗೆ ಸಮಗ್ರ ಚಿಂತನ-ಮಂಥನ ಪಕ್ಷ ಹಾಗೂ ಸಂಘದ ನಾಯಕರು ಮಾಡಬೇಕಿದೆ.
ಗ್ಯಾರಂಟಿ ಯೋಜನೆಗಳನ್ನೇ ಬಳಸಿ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಸ್ಥಾನ ಪಡೆದುಕೊಂಡು ನಾಗಾಲೋಟದಿಂದ ಸಾಗುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಬೇಕಾದ ಪ್ರತಿಪಕ್ಷ ಬಿಜೆಪಿ ಪರಸ್ಪರ ತಮ್ಮ ಕೆಸರೆರೆಚಾಡಿಕೊಂಡು ಕಾಲಹರಣ ಮಾಡುತ್ತಿರುವುದು ಮುಂದುವರಿದರೆ ಮುಂದಿನ ಚುನಾವಣೆ ವೇಳೆಗೆ ಎರಡಂಕಿ ಸ್ಥಾನದಿಂದ ಒಂದಂಕಿಗೆ ಇಳಿದರೂ ಅಚ್ಚರಿಪಡಬೇಕಿಲ್ಲ.
– ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಲೇಖಕರು