ಕೋಲ್ಕತಾ; ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮಾಲ್ಡಾ ಟೌನ್ ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ವಂದೇ ಭಾರತ್ ಆವೃತ್ತಿಯ ರೈಲುಗಳ ಮೊದಲ ಸ್ಲೀಪರ್ ರೈಲು ಇದಾಗಿದ್ದು, ಅಸ್ಸಾಂನ ಗುವಾಹಟಿ ಮತ್ತು ಬಂಗಾಳದ ರಾಜಧಾನಿ ಕೋಲ್ಕತ್ತಾದ ನಡುವೆ ಸಂಚರಿಸಲಿದೆ.
ಇದೇ ವೇಳೆ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಸಂಪರ್ಕ ಬಲಪಡಿಸುವ 3,250 ಕೋಟಿ ರೂಪಾಯಿ ವೆಚ್ಚದ ಹಲವಾರು ರೈಲು ಮತ್ತು ರಸ್ತೆ ನಿರ್ಮಾಣ ಯೋಜನೆಗಳಿಗೂ ಪ್ರಧಾನಿ ಮೋದಿ ಚಾಲನೆ ನೀಡಿದರು.
ನ್ಯೂ ಜಲ್ಪೈಗುರಿಯಿಂದ ನಾಗರಕೋಯಿಲ್ ಮತ್ತು ತಿರುಚಿರಾಪಳ್ಳಿಯೊಂದಿಗೆ ಸಂಪರ್ಕಿಸುವ ನಾಲ್ಕು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಅಲಿಪುರ್ದೂರ್ನಿಂದ ಬೆಂಗಳೂರು ಮತ್ತು ಮುಂಬೈಗೆ ಸಂಪರ್ಕಿಸುವ ರೈಲುಗಳಿಗೆ ವರ್ಚುವಲ್ ಆಗಿ ಹಸಿರು ನಿಶಾನೆ ತೋರಿಸಿದರು.
ಆಧುನಿಕ ಭಾರತದಲ್ಲಿ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸಲು ಸಂಪೂರ್ಣ ಹವಾನಿಯಂತ್ರಿತ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರಿಗಾಗಿ ಅನಾವರಣಗೊಳಿಸಲಾಗಿದೆ. ಕಡಿಮೆ ದರದಲ್ಲಿ ವಿಮಾನಯಾನ ಪ್ರಯಾಣದ ಅನುಭವ ಇದರಲ್ಲಿ ಸಿಗಲಿದೆ. ಈ ರೈಲು ದೀರ್ಘ ಪ್ರಯಾಣ, ವೇಗ, ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರವಾಗಿರಲಿದೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಎಸಿ ಸ್ಲೀಪರ್ ರೈಲು ಬಂಗಾಳದ ಹೌರಾ ಮತ್ತು ಅಸ್ಸೋಂನ ಗುವಾಹಟಿ ಮಾರ್ಗ ಪ್ರಯಾಣವನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಇದು ಧಾರ್ಮಿಕ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


