Menu

ಅಕ್ರಮ ಹಣ ವರ್ಗಾವಣೆ: ವಿನ್‌ಜೋ ಸಂಸ್ಥಾಪಕ ಸೇರಿ ಇಬ್ಬರ ಬಂಧನ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಸಂಬಂಧ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ ‘ವಿನ್‌ಜೋ’ ಸಂಸ್ಥಾಪಕ ಸೌಮ್ಯಸಿಂಗ್ ರಾಥೋಡ್‌ ಹಾಗೂ ಪಾವನ್ ನಂದಾರನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸಿದ್ದಾರೆ.

ಕಳೆದ ನ.18ರಿಂದ ನ.22ರವರೆಗೆ ವಿನ್‌ಜೋ ಮತ್ತು ಈ ಕಂಪನಿಗೆ ಸೇರಿದ ಗೇಮ್ಜ್‌ಕ್ರಾಫ್ಟ್‌ ಎಂಬ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ಗಳಿಕೆ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಿನ್‌ಜೋ ಕಂಪನಿಯ 505 ಕೋಟಿ ರೂ. ಅನ್ನು ಜಪ್ತಿ ಮಾಡಲಾಗಿತ್ತು. ಈ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ರಾತ್ರಿ ಬಂಧಿಸಲಾಗಿತ್ತು. ಬಳಿಕ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು 1 ದಿನದ ಕಸ್ಟಡಿಗೆ ನೀಡಿದೆ.

ಕೇಂದ್ರ ಸರ್ಕಾರವು ಈ ರಿಯಲ್‌ ಮನಿ ಗೇಮ್ಸ್‌ ನಿಷೇಧಿಸಿದ ಬಳಿಕವೂ ಈ ಕಂಪನಿ ಗ್ರಾಹಕರಿಗೆ ಮರುಪಾವತಿ ಮಾಡದೇ ಇನ್ನೂ 43 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ಕಂಪನಿಯು ಅಪರಾಧ ಚಟುವಟಿಕೆಗಳು, ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಇಡಿ ತಿಳಿಸಿದೆ.

ಕಂಪನಿಯು ಗ್ರಾಹಕರು ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ಕಟ್ಟಿ ಸಾಫ್ಟ್‌ವೇರ್‌ ಜತೆಗೆ ಆಟವಾಡುವಂತೆ ಮಾಡಿತ್ತು. ಗ್ರಾಹಕರು ತಾವು ಮನುಷ್ಯರ ಜತೆಗೆ ಆಟವಾಡುತ್ತಿದ್ದೇವೆ ಎಂದು ಬೆಟ್ಟಿಂಗ್‌ ಕಟ್ಟಿ ಆಟವಾಡುತ್ತಿದ್ದರು. ಸಾಫ್ಟ್‌ವೇರ್‌ ಜತೆಗೆ ಆಟವಾಡುತ್ತಿರುವ ವಿಚಾರವನ್ನು ಕಂಪನಿ ಗ್ರಾಹಕರಿಗೆ ಮುಚ್ಚಿಟ್ಟಿತ್ತು. ವಿನ್‌ಜೋ ವ್ಯಾಲೆಟ್‌ಗಳಲ್ಲಿ ಗ್ರಾಹಕರು ಹೊಂದಿರುವ ಹಣವನ್ನು ಹಿಂಪಡೆಯುವುದನ್ನು ತಡೆ ಹಿಡಿದಿತ್ತು. ಹೀಗೆ ಕಂಪನಿಯು ಗ್ರಾಹಕರನ್ನು ವಂಚಿಸಿ ಗಳಿಸಿದ ಅಕ್ರಮ ಆದಾಯವನ್ನು ವಿವಿಧ ರೂಪಗಳಲ್ಲಿ ಇರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಕಂಪನಿಯು ಭಾರತದಿಂದ ಒಂದೇ ಅಪ್ಲಿಕೇಶನ್‌ ಅಡಿ ರಿಯಲ್‌ ಮನಿ ಗೇಮ್ಸ್‌ಗಳ ಜಾಗತಿಕ ಕಾರ್ಯಾಚರಣೆಗಳನ್ನು ಕೈಗೊಂಡಿತ್ತು. ಅಲ್ಲದೆ, ದಾಳಿ ವೇಳೆ ವಂಚಕ ಕಂಪನಿಯೂ ಗೇಮಿಂಗ್‌ ಹೆಸರಲ್ಲಿ ರಹಸ್ಯವಾಗಿ ಕೆಲ ಸಾಫ್ಟ್‌ವೇರ್‌ಗಳನ್ನು ಬಳಸಿ ಗ್ರಾಹಕರನ್ನು ಸೋಲಿಸುತ್ತಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಇಡಿ ಮಾಹಿತಿ ನೀಡಿದೆ.

ಜೊತೆಗೆ ಈ ಕಂಪನಿ ವಿರುದ್ಧ ಈ ಹಿಂದೆ ವಂಚನೆ, ಖಾತೆಗಳ ನಿರ್ಬಂಧ, ಗ್ರಾಹಕರ ಪಾನ್‌ ಕಾರ್ಡ್‌, ಕೆವೈಸಿ ದುರುಪಯೋಗ ಸೇರಿ ವಿವಿಧ ಆರೋಪಗಳಡಿ ದಾಖಲಾಗಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು. ಈ ಕಂಪನಿಯು ಬ್ರೆಜಿಲ್‌, ಯುಎಸ್‌ಎ, ಜರ್ಮನಿ ಮೊದಲಾದ ದೇಶಗಳ ರಿಯಲ್‌ ಮನಿ ಗೇಮ್ಸ್‌ಗಳನ್ನು ಭಾರತದಿಂದಲೇ ನಿರ್ವಹಿಸುತ್ತಿರುವುದು ತನಿಖೆಯಲ್ಲಿ ಬಯಲಾಗಿದೆ. ಈ ಕಂಪನಿಯು ಅಪರಾಧ ಚಟುವಟಿಕೆಗಳು, ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಹೂಡಿಕೆಗಳ ನೆಪದಲ್ಲಿ ಹಣ:

ಇದರೊಂದಿಗೆ ವಿದೇಶಿ ಹೂಡಿಕೆಗಳ ನೆಪದಲ್ಲಿ ಭಾರತೀಯ ಘಟಕದ ಹಣವನ್ನು ಯುಎಸ್‌ಎ ಮತ್ತು ಸಿಂಗಾಪುರಕ್ಕೆ ತಿರುಗಿಸಿದೆ. 55 ಮಿಲಿಯನ್‌ ಯುಎಸ್‌ ಡಾಲರ್‌(489.90 ಕೋಟಿ ರು.) ಮೌಲ್ಯದ ಹಣವನ್ನು ಕಂಪನಿಯ ಯುಎಸ್‌ಎ ಬ್ಯಾಂಕ್‌ ಖಾತೆಯಲ್ಲಿ(ವಿನ್‌ಜೋ ಯುಎಸ್‌ ಇಂಕ್‌ ಡಾಟ್‌) ಇರಿಸಿದೆ. ಇದರ ಎಲ್ಲಾ ಕಾರ್ಯಾಚರಣೆಗಳು ಹಾಗೂ ದೈನಂದಿನ ವ್ಯವಹಾರ ಚಟುವಟಿಕೆಗಳು, ಬ್ಯಾಂಕ್‌ ಖಾತೆಗಳ ಕಾರ್ಯಾಚರಣೆ ಭಾರತದಿಂದ ಮಾಡಲಾಗುತ್ತಿದೆ. ಹೀಗಾಗಿ ಇದೊಂದು ಶೆಲ್‌ ಕಂಪನಿಯಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *