ಸರ್ಕಾರ ಶಾಲಾ ಶಿಕ್ಷಕರ ಬಡ್ತಿ ನೀತಿಯಲ್ಲಿ ಮಹತ್ತರ ಬದಲಾವಣೆಯನ್ನು ಮಾಡಿದ್ದು, ಶಿಕ್ಷಕರಿಗೆ ಬಡ್ತಿ ಪಡೆಯಲು ಅರ್ಹತಾ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಇದು ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮಾತ್ರ ಅನ್ವಯವಾಗುವುದು.
ಶಿಕ್ಷಕರು ಕನಿಷ್ಠ 10 ವರ್ಷ ಸೇವೆ ಪೂರೈಸಿರಬೇಕು, ಬಿಎಡ್ ಪದವಿ ಶಿಕ್ಷಕರು ಮಾತ್ರ ಬಡ್ತಿಗೆ ಅರ್ಹರಾಗಿದ್ದು, 100 ಅಂಕಗಳ ವಿಷಯವಾರು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕವೇ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ ಸಿಗಲಿದೆ.
ಫ್ರೀಡಂ ಪಾರ್ಕ್‌ನಲ್ಲಿ ಉಪನ್ಯಾಸಕರ ಪ್ರತಿಭಟನೆ
ಸರ್ಕಾರದ ತೀರ್ಮಾನಗಳು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸದಿರುವುದನ್ನು ಖಂಡಿಸಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ಕೈಗೊಂಡಿದ್ದಾರೆ.
ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ ಅನುಮತಿ ನೀಡಬಾರದು, ಸರ್ಕಾರಿ/ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಉತ್ತರಪತ್ರಿಕೆ ಮೌಲ್ಯಮಾಪನ ಸಂಭಾವನೆ ಸೇರಿದಂತೆ ಬಾಕಿ ಇರುವ ₹13.5 ಕೋಟಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು.
9-10 ಹಾಗೂ 11-12 ತರಗತಿಗಳ ಬೋಧನೆಯನ್ನು ಒಂದೇ ಶೈಕ್ಷಣಿಕ ಜೋಡಣೆಯಂತೆ ಪರಿಗಣಿಸುವ ಕಡತವನ್ನು ತಿರಸ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸರ್ಕಾರಿ ಪಿಯು ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಬೋಧಕೇತರ ಹಾಗೂ Group-D ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಸಹಾಯಕ ನಿರ್ದೇಶಕರ ಹುದ್ದೆಗೆ ಇಬ್ಬರು ಹಿರಿಯ ಪ್ರಾಂಶುಪಾಲರನ್ನು ನಿಯೋಜಿಸಬೇಕು. ಪದವಿ ಪೂರ್ವ ಪರೀಕ್ಷಾ ವಿಭಾಗವನ್ನು ಮತ್ತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಮರಳಿ ವರ್ಗಾಯಿಸಬೇಕು. ಉನ್ನತ ಶಿಕ್ಷಣ ಇಲಾಖೆಯ ಮಾದರಿಯಲ್ಲಿ ಪಿಯು ಅಕಾಡೆಮಿಕ್ ಕೌನ್ಸಿಲ್ ರಚಿಸಬೇಕು. 01-04-2006 ನಂತರ ನೇಮಕವಾದ ಉಪನ್ಯಾಸಕರಿಗೆ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪಿಯುಗೆ ಎರಡೇ ಪರೀಕ್ಷೆಗಳು
ಎಸ್ಸೆಸ್ಸೆಲ್ಸಿ ಮತ್ತು ಪಿಯುಗೆ ವರ್ಷಕ್ಕೆ ಮೂರು ಪರೀಕ್ಷೆಗಳ ಸೂತ್ರ ಅನುಸರಿಸುತ್ತಿದ್ದ ರಾಜ್ಯ ಸರ್ಕಾರ ಅದನ್ನು ಎರಡು ಪರೀಕ್ಷೆಗಳಿಗೆ ಇಳಿಸಲು ನಿರ್ಧರಿಸಿದೆ. ಉತ್ತೀರ್ಣ ಅಂಕಗಳನ್ನು ಶೇಕಡಾ 35ರಿಂದ 33ಕ್ಕೆ ಇಳಿಕೆ ಮಾಡಿರುವುದರಿಂದ ಮೂರು ಪರೀಕ್ಷೆಗಳ ವಿಧಾನ ಕೈ ಬಿಟ್ಟಿದೆ.
ಹೀಗಾಗಿ ಎಸ್ಸೆಸ್ಸೆಲ್ಸಿ ಮತ್ತು ಸೆಕೆಂಡ್ ಪಿಯು ಎರಡು ಪರೀಕ್ಷೆಗಳು ನಡೆಯಲಿದ್ದು, ಈ ಶೈಕ್ಷಣಿಕ ವರ್ಷದ ಅಂತಿಮ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ.


