ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ಸೆಷನ್ಸ್ ಕೋರ್ಟ್ ನೀಡಿದ್ದ ಮನೆಯೂಟದ ಅನುಮತಿಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿರುವ ಪವಿತ್ರಾ ಗೌಡ, ಲಕ್ಷ್ಮಣ್ ಮತ್ತು ನಾಗರಾಜ್ ಈ ಮೂವರು ಆರೋಪಿಗಳಿಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಬೆಂಗಳೂರಿನ ಸೆಷನ್ಸ್ ಕೋರ್ಟ್ ಅನುಮತಿ ನೀಡಿತ್ತು. ಈ ಆದೇಶಕ್ಕೆ ಕಾರಾಗೃಹ ಇಲಾಖೆ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು, ಮೇಲ್ಮನವಿ ಪರಿಶೀಲಿಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸೆಷನ್ಸ್ ಕೋರ್ಟ್ ವಾರಕ್ಕೊಮ್ಮೆ ಮನೆಯೂಟಕ್ಕೆ ಅನುಮತಿ ಕೊಟ್ಟಿದ್ದು, ಕಾರಾಗೃಹ ಇಲಾಖೆಯು ವಿರೋಧ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇತರ ಆರೋಪಿಗಳು ಇದೇ ರೀತಿ ಬೇಡಿಕೆ ಇಡುವ ಸಾಧ್ಯತೆ ಇದೆ . ಕೊಲೆ ಪ್ರಕರಣದ ಆರೋಪಿಗಳಿಗೆ ಮನೆಯೂಟ ಸೌಲಭ್ಯ ನೀಡುವುದು ಜೈಲು ನಿಯಮಗಳಿಗೆ ವಿರುದ್ಧ ಎಂದು ಇಲಾಖೆ ವಾದಿಸಿದೆ.
ಪರಪ್ಪನ ಅಗ್ರಹಾರ ಜೈಲಿನ ಊಟಕ್ಕೆ FSSAI4 ಸ್ಟಾರ್ ರೇಟಿಂಗ್ ನೀಡಿದೆ. ಜೈಲಿನ ಊಟದ ಗುಣಮಟ್ಟದ ಬಗ್ಗೆ ಯಾರೂ ಆಕ್ಷೇಪ ಎತ್ತಿಲ್ಲ. ಹೀಗಾಗಿ ಹೈಕೋರ್ಟ್ ಮೇಲ್ಮನವಿಯನ್ನು ಪರಿಗಣಿಸಿ ಸೆಷನ್ಸ್ ಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್‌ಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ನಗರದ ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಲು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಪ್ರಕರಣದ ತನಿಖೆ ನಡೆಸಿರುವ ನಗರದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಮೂವರು ಆರೋಪಿಗಳು ಸಲ್ಲಿಸಿದ ಮನವಿ ಆಧರಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮೂವರು ಆರೋಪಿಗಳಿಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ 2026ರ ಜ.12ರಂದು ನಿರ್ದೇಶಿಸಿತ್ತು.


