ಆಸ್ತಿ ವಿಷಯದಲ್ಲಿ ಉಂಟಾದ ಅಸಮಾಧಾನದಿಂದ ಮೊಮ್ಮಗ ಉದ್ಯಮಿ ತಾತನನ್ನು 73 ಬಾರಿ ಇರಿದು ಕೊಂದಿದ್ದೂ ಅಲ್ಲದೇ ತಡೆಯಲು ಬಂದ ತಾಯಿಯ ಮೇಲೂ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಹೈದರಬಾದ್ ನಲ್ಲಿ ನಡೆದಿದೆ.
460 ಕೋಟಿ ಮೌಲ್ಯದ ವೆಲ್ಜಾನ್ ಗ್ರೂಪ್ ಆಫ್ ಕಂಪನೀಸ್ ನ ವ್ಯವಸ್ಥಾಪಕ ನಿರ್ದೇಶಕ 86 ವರ್ಷದ ವಿಸಿ ಜನಾರ್ದನ್ ರಾವ್ ಅವರನ್ನು 28 ವರ್ಷದ ಮೊಮ್ಮಗ ಕೀರ್ತಿ ತೇಜಾ ಭೀಕರವಾಗಿ ಕೊಲೆ ಮಾಡಿದ್ದಾನೆ.
ವೆಜ್ಞಾನ್ ಗ್ರೂಪ್ ಆಫ್ ಕಂಪನಿ ಹೈಡ್ರಾಲಿಕ್ ಉಪಕರಣ, ಹಡಗು ನಿರ್ಮಾಣ, ಇಂಧನ ಹಾಗೂ ಕೈಗಾರಿಕಾ ಉಪಕರಣಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಉತ್ತಮ ಹೆಸರು ಮಾಡಿದೆ.
ಅಮೆರಿಕದಲ್ಲಿ ಪೋಸ್ಟ್ ಗ್ರ್ಯಾಜ್ಯುಯೆಟ್ ಪೂರೈಸಿ ಸ್ವದೇಶಕ್ಕೆ ಮರಳಿದ್ದ ಕೀರ್ತಿ ಹಾಗೂ ಅವರ ತಾಯಿ ಸರೋಜಿನಿ ದೇವಿ ತಾತ ಜನಾರ್ದನ ರಾವ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಬಂದಿದ್ದರು.
ತಾತನ ಮನೆ ಬಂದು ಮಾತುಕತೆ ನಡೆಸುವಾಗ ತಾಯಿ ಸರೋಜಿನಿ ಟೀ ಮಾಡಲು ಅಡುಗೆ ಮನೆಗೆ ಹೊಗಿದ್ದರು. ಈ ವೇಳೆ ಕಂಪನಿಯ ನಿರ್ದೇಶಕ ಸ್ಥಾನ ಕುರಿತು ಮಾತುಕತೆ ನಡೆದಿದ್ದು, ವಾಗ್ವಾದಕ್ಕೆ ತಿರುಗಿದೆ.
ಇತ್ತೀಚೆಗಷ್ಟೇ ಕಂಪನಿಯ ನಿರ್ದೇಶಕರನ್ನಾಗಿ ಮಗಳ ಮಗ ಶ್ರೀ ಕೃಷ್ಣ ಅವರನ್ನು ನೇಮಕ ಮಾಡಿದ್ದರು. ಇದಕ್ಕಾಗಿ 4 ಕೋಟಿ ರೂ.ಮೌಲ್ಯದ ಷೇರುಗಳನ್ನು ವರ್ಗಾಯಿಸಿದ್ದರು. ಎರಡನೇ ಪುತ್ರಿ ಸರೋಜಿನಿ ಅವರ ಮಗ ಕೀರ್ತಿ ವಿದ್ಯಾಭ್ಯಾಸ ಮುಗಿಸಿ ಕೆಲವು ದಿನಗಳ ಹಿಂದೆಯಷ್ಟೇ ತವರಿಗೆ ಮರಳಿದ್ದ.
ನನಗೂ ನಿರ್ದೇಶಕ ಸ್ಥಾನ ನೀಡದೇ ತಾರತಮ್ಯ ಮಾಡಿದ್ದಿಯಾ ಎಂದು ಆರೋಪಿಸಿದ ಕೀರ್ತಿ ಗಲಾಟೆ ಮಾಡಿದ್ದು, ಇದು ವಿಕೋಪಕ್ಕೆ ತಿರುಗಿದ್ದರಿಂದ ಸಮೀಪದಲ್ಲೇ ಇದ್ದ ಚಾಕುವಿನಿಂದ 73 ಬಾರಿ ಇರಿದು ಕೊಂದಿದ್ದಾನೆ. ಕೂಗಾಟ ಕೇಳಿ ಬಂದ ತಾಯಿ ಸರೋಜಿನಿ ತಡೆಯಲು ಬಂದಾಗ ಅವರ ಮೇಲೂ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.