ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಬೆನ್ನಲ್ಲೇ ಒಂದರ ಮೇಲೋಂದರಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿರುವ ಡೊನಾಲ್ಡ್ ಟ್ರಂಪ್ ಇದೀಗ ಸ್ಟೀಲ್ ಮತ್ತು ಅಲ್ಯೂಮಿನಿಯಂ ಆಮದು ಮೇಲೆ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹೇರಲು ಮುಂದಾಗಿದ್ದಾರೆ.
ಭಾನುವಾರ ಏರ್ ಫೋರ್ಸ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಮಂಗಳವಾರ ನೂತನ ತೆರಿಗೆ ಪದ್ಧತಿ ಜಾರಿಗೆ ಸಹಿ ಹಾಕಲಿದ್ದೇನೆ. ಮತ್ತು ತತ್ ಕ್ಷಣದಿಂದಲೇ ಈ ನೂತನ ನಿಯಮ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಯಾವ ವರ್ಗ ಅಥವಾ ಕ್ಷೇತ್ರವನ್ನು ಗುರಿಯಾಗಿಸಿ ತೆರಿಗೆ ಹೆಚ್ಚಿಸಲಾಗುವುದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಅವರು, ನಮಗೆ ಯಾರು ತೆರಿಗೆ ಹಾಕುತ್ತಿದ್ದಾರೋ ಅವರ ಮೇಲೆ ನಾವು ತೆರಿಗೆ ವಿಧಿಸುತ್ತೇವೆ. ಇದು ನಮ್ಮ ಸರಳ ನಿಯಮ ಎಂದು ಅವರು ಹೇಳಿದರು.
2016-2020ರ ವರೆಗೆ ಮೊದಲ ಬಾರಿ ಅಧ್ಯಕ್ಷರಾಗಿದ್ದಾಗ ಡೊನಾಲ್ಡ್ ಟ್ರಂಪ್ ಸ್ಟೀಲ್ ಮತ್ತು ಅಲ್ಯುಮಿನಿಯಂ ಆಮದು ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದ್ದರು. ನಂತರ ಸುಂಕವನ್ನು ಕಡಿಮೆ ಮಾಡಿದ್ದರು. ಈ ಬಾರಿ ಶೇ.25ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದ ಎಂದು ಮೂಲಗಳು ತಿಳಿಸಿವೆ.
ಕೆನಡಾ, ಅರ್ಜೆಂಟೀನಾ, ಮೆಕ್ಸಿಕೊ, ಜಪಾನ್, ಬ್ರಿಟನ್ ಅಲ್ಲದೇ ಯುರೋಪಿಯನ್ ದೇಶಗಳಿಂದ ಅಮೆರಿಕಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ಟೀಲ್ ಮತ್ತು ಅಲ್ಯುಮಿಯಂ ಆಮದು ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಯುರೋಪಿಯನ್ ದೇಶಗಳನ್ನು ಗುರಿಯಾಗಿಸಿ ತೆರಿಗೆ ಹೇರಿಕೆ ಮಾಡಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.