ಮೈಕ್ರೋ ಫೈನಾನ್ಸ್ ಗಳ ನಿಯಂತ್ರಣಕ್ಕೆ ರಾಜ್ಯ ಸರಕಾರ ರೂಪಿಸಿರುವ ಮಸೂದೆಯ ಸುಗ್ರೀವಾಜ್ಞೆ ಪ್ರಸ್ತಾಪವನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ. ಒಂದಷ್ಟು ಮರು ಪರಿಶೀಲನೆ ಮಾಡುವಂತೆ ತಿಳಿಸಿದ್ದಾರೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳೆಲ್ಲ ಬ್ಯಾಂಕಿಂಗ್ ನಿಯಮದಂತೆ ಕೆಲಸ ಮಾಡಬೇಕು. ಅದರಂತೆ ಅನೇಕ ಸಂಸ್ಥೆಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಹಲವರು ಖಾಸಗಿ ವಸೂಲಿ ಏಜೆಂಟ್ ಗಳನ್ನು ಇಟ್ಟು ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದು, ಸಾಲಗಾರರು ಮರ್ಯಾದೆಗೆ ಅಂಜಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿವೆ. ಇದನ್ನು ತಪ್ಪಿಸಲು ಸರಕಾರ ಕಾಯ್ದೆ ರೂಪಿಸಿ, ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಕಳುಹಿಸಿದೆ. ಕಾಯ್ದೆಯಲ್ಲಿ 5 ಲಕ್ಷ ರೂ. ವರೆಗೆ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆಗೆ ಅವಕಾಶ ಇದೆ. ಹೀಗಾದರೆ ಸಾಲ ಕೊಡಲು ಯಾವುದೇ ಸಂಸ್ಥೆ ಮುಂದೆ ಬರುವುದಿಲ್ಲ. ಇದರಿಂದ ಜನರಿಗೆ ಸಮಸ್ಯೆ ಆಗಬಹುದು ಆಕ್ಷೇಪಿಸಿರುವ ರಾಜ್ಯಪಾಲರು ಮರು ಪರಿಶೀಲನೆ ಮಾಡುವಂತೆ ಹೇಳಿದ್ದಾರೆ ಎಂದು ವಿವರಿಸಿದ್ದಾರೆ.
ಸಹಕಾರಿ ಸಂಸ್ಥೆಯಲ್ಲಿ ಸಾಲ ಕೊಡುವಾಗ ಹಣವನ್ನು ಸರಕಾರ ಕೊಡುವುದಿಲ್ಲ. ರೈತರು 365 ದಿನದ ಒಳಗಾಗಿ ಸಾಲ ಮರುಪಾವತಿ ಮಾಡಿದರೆ ಅದರ ಬಡ್ಡಿ ಸರಕಾರ ಪಾವತಿ ಮಾಡುತ್ತದೆ. ಸಹಕಾರಿ ವಲಯದಲ್ಲಿ ಹಣಕಾಸಿನ ಲಭ್ಯತೆ ಆಧಾರದ ಮೇಲೆ ಸಾಲ ನೀಡಲಾಗುತ್ಗತದೆ. ನಬಾರ್ಡ ನಿಂದ ಹೆಚ್ಚಿನ ಹಣಕ್ಕೆ ಮನವಿ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಜಾರಿಯಲ್ಲಿರುವ ಯಾವುದೇ ಗ್ಯಾರಂಟಿ ನಿಲ್ಲಿಸುವುದಿಲ್ಲ. ಒಂದು ತಿಂಗಳು ಹಣ ಬರುವುದು ತಡ ಆಗಬಹುದು. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಕೂಡ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದ ಬೆಳಗಾವಿ ಅಧಿವೇಶನ ಯಶಸ್ವಿಯಾಗಿದೆ. ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಸೂಚನೆ ಇದೆ. ಈ ಬಗ್ಗೆ ಮಾತನಾಡುವುದಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.