ಬೆಳಗಾವಿಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಬ್ಬಿನ ಗದ್ದೆಗೆ ಎಳೆದೊಯ್ದು ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 23ರಂದು ಘಟನೆ ನಡೆದಿದ್ದು, ಆರೋಪಿಗಳು ಬಾಲಕಿಯ ಕುಟುಂಬಸ್ಥರಿಗೆ ಜೀವ ಬೆದರಿಕೆ ಒಡ್ಡಿದ್ದ ಹಿನ್ನಲೆ ಪ್ರಕರಣ ತಡವಾಗಿ ಬಹಿರಂಗಗೊಂಡಿದೆ.
ಹಿಟ್ಟು ಬೀಸಲು ತೆರಳಿದ್ದ ಬಾಲಕಿ ಮೇಲೆ ಆರೋಪಿಗಳಾದ ಮಣಿಕಂಠ ದಿನ್ನಿಮನಿ ಮತ್ತು ಈರಣ್ಣ ಸಂಕಮ್ಮನವರ ಅತ್ಯಾಚಾರ ನಡೆಸಿದ್ದಾರೆ. ಮನೆಯಿಂದ ಮುನ್ನೂರು ಮೀಟರ್ ದೂರ ಇರುವ ಹಿಟ್ಟಿನ ಗಿರಣಿಗೆ ಹಿಟ್ಟು ರುಬ್ಬಿಸಿಕೊಂಡು ಬರಲು ಬಾಲಕಿ ತೆರಳಿದ್ದಾಗ ಆಕೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ. ದೂರು ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.
ಹೆಡ್ ಕಾನ್ಸ್‌ಟೇಬಲ್ ಶವ ಕೆರೆಯಲ್ಲಿ ಪತ್ತೆ
ರಾಮನಗರದಲ್ಲಿ ಹೆಡ್ ಕಾನ್ಸ್‌ಟೇಬಲ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಶವ ಕೆರೆಯಲ್ಲಿ ಪತ್ತೆಯಾಗಿದೆ. ಲಕ್ಷ್ಮಣ್ (51) ಮೃತ ಹೆಡ್ ಕಾನ್ಸ್‌ಟೇಬಲ್. ಅವರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕರ್ತವ್ಯಕ್ಕೆ ಅವರು ಗೈರು ಹಾಜರಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಬೆಳಗ್ಗೆ ಕೆರೆಯಲ್ಲಿ ಲಕ್ಷ್ಮಣ್ ಶವವಾಗಿ ಪತ್ತೆಯಾಗಿದ್ದಾರೆ.
ಹೆಲ್ಮೆಟ್ ಸಮೇತ ಲಕ್ಷ್ಮಣ್ ಕೆರೆಗೆ ಬಿದ್ದಿದ್ದಾರೆ. ಕೆರೆ ಪಕ್ಕದಲ್ಲೇ ಬೈಕ್ ಪತ್ತೆಯಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ
ಜಾರಿಬಿದ್ದಿರಬಹುದಾ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


