ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಮತ್ತು ಮಗು ಮೃತಪಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಇಬ್ಬರೂ ಅಸ್ವಸ್ಥರಾಗಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ದೊಡ್ಡ ಮಗಳನ್ನು ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಹೋಗುತ್ತಿದ್ದ ಚಾಂದಿನಿ ಸೋಮವಾರ ಹೋಗಿಲ್ಲ, ಪತಿ ಕಿರಣ್‌ಗೆ ಕಾಲ್ ಮಾಡಿದ್ದರು. ಬಳಿಕ ಚಾಂದಿನಿಗೆ ಕರೆ ಮಾಡಿದರೆ ರಿಸೀವ್ ಮಾಡಿರಲಿಲ್ಲ. ಇದರಿಂದ ಕಿರಣ್ ಅವರು ತಮ್ಮನಿಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು.
ಕಿರಣ್ ತಮ್ಮ ಪ್ರವೀಣ್ ಮನೆಗೆ ಬಂದು ನೋಡಿದಾಗ ಬಾತ್ ರೂಮ್‌ನಲ್ಲಿ ತಾಯಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಗ್ಯಾಸ್ ಗೀಸರ್ ಸೋರಿಕೆಯಿಂದ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗೋವಿಂದ ರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಮಗಳು, ಮೊಮ್ಮಗ ಆತ್ಮಹತ್ಯೆ ನೋಡಿದ ಅಜ್ಜಿ ಹೃದಯಾಘಾತಕ್ಕೆ ಬಲಿ
ಬೆಂಗಳೂರಿನ ಕೋರಮಂಗಲ ಬಳಿ ತಾವರೆಕೆರೆ ಎರಡನೇ ರಸ್ತೆಯಲ್ಲಿ ಮಗಳು, ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಮಿಳುನಾಡಿನ ಧರ್ಮಪುರಿಯವರಾದ ಸುಧಾ (38), ಮಗ ಮೋನಿಷ್ (14) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಕಂಡು ಅಜ್ಜಿ ಮುದ್ದಮ್ಮ(68) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಸುಧಾ ಬಿರಿಯಾನಿ ಸೆಂಟರ್, ಚಿಪ್ಸ್ ಶಾಪ್ ಹಾಗೂ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಮೋನಿಷ್ 7ನೇ ತರಗತಿ ಓದುತ್ತಿದ್ದ. ಸುಧಾ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಸಾಲ ಮಾಡಿಕೊಂಡಿದ್ದರು. ಮೂರು ತಿಂಗಳ ಹಿಂದೆಬಿರಿಯಾನಿ ಹಾಗೂ ಚಿಪ್ಸ್ ಸೆಂಟರ್‌ನ್ನು ಬೇರೆಯವರಿಗೆ ಕೊಟ್ಟಿದ್ದರು. ಪಡೆದವನು ಹಣ ಕೊಟ್ಟಿರಲಿಲ್ಲ. ಧರ್ಮಪುರಿಯಿಂದ ಸಾಲ ಪಡೆದಿದ್ದ ಸುಧಾಗೆ ಸಾಲದ ಕಾಟ ಶುರುವಾತ್ತು. ಭಾನುವಾರ ಧರ್ಮಪುರಿಯ ದೇಗುಲಕ್ಕೆ ಮೂವರು ಒಟ್ಟಿಗೆ ಹೋಗಿ ಬಂದಿದ್ದರು ಎಂದು ಹೇಳಲಾಗಿದೆ.
ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೂವರ ಮೃತದೇಹಗಳನ್ನೂ ಸೇಂಟ್‌ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮನೆಯಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


