ಭಾರತದ ಸಂಘಟಿತ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಮೊದಲ ಏಕದಿನ ಪಂದ್ಯದಲ್ಲಿ 248 ರನ್ ಗೆ ಆಲೌಟಾಗಿದೆ.
ನಾಗ್ಪುರದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಸ್ಫೋಟಕ ಆರಂಭದ ಹೊರತಾಗಿಯೂ 47.4 ಓವರ್ ಗಳಲ್ಲಿ 248 ರನ್ ಗೆ ಪತನಗೊಂಡಿದೆ.
ಟಿ-20 ಸರಣಿಯಲ್ಲಿ ಸೋಲುಂಡ ನಂತರ ಏಕದಿನ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಫಿಲ್ ಸಾಲ್ಟ್ ಮತ್ತು (43 ರನ್, 26 ಎಸೆತ, 5 ಬೌಂಡರಿ, 3 ಸಿಕ್ಸರ್] ಮತ್ತು ಬೆನ್ ಡುಕೆಟ್ (32 ರನ್, 29 ಎಸೆತ, 6 ಬೌಂಡರಿ] ಮೊದಲ ವಿಕೆಟ್ ಗೆ 8.5 ಓವರ್ ಗಳಲ್ಲಿ 75 ರನ್ ಪೇರಿಸಿ ಮಿಂಚಿನ ಆರಂಭ ನೀಡಿದರು.
ಫಿಲ್ ಸಾಲ್ಟ್ ರನೌಟ್ ಆಗುತ್ತಿದ್ದಂತೆ ನಾಟಕೀಯ ಕುಸಿತ ಕಂಡ ಇಂಗ್ಲೆಂಡ್ ತಂಡ 111 ರನ್ ಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿ ತಲುಪಿತು.
ಈ ಹಂತದಲ್ಲಿ ಜೊತೆಯಾದ ನಾಯಕ ಜೋಸ್ ಬಟ್ಲರ್ ಮತ್ತು ಜೇಕಬ್ ಬೆಥಾಲಿ ವೈಯಕ್ತಿಕ ಅರ್ಧಶತಕಗಳನ್ನು ಬಾರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಬಟ್ಲರ್ 67 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 52 ರನ್ ಬಾರಿಸಿ ಔಟಾದರೆ, ಜೇಕಬ್ 64 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 51 ರನ್ ಗಳಿಸಿ ನಿರ್ಗಮಿಸಿದರು.
ಭಾರತದ ಪರ ಹರ್ಷಿತ್ ರಾಣಾ ಮತ್ತು ಸ್ಪಿನ್ನರ್ ಜಡೇಜಾ ತಲಾ 3 ವಿಕೆಟ್ ಕಬಳಿಸಿದರು. ಮೊಹಮದ್ ಶಮಿ, ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.