ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಏಳು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಕಾರ್ಖಾನೆಯೊಳಗೆ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಯಿದೆ.
ಘಟನೆ ನಡೆದಾಗ 25 ಕಾರ್ಮಿಕರು ಸ್ಥಳದಲ್ಲಿದ್ದರು ಎನ್ನಲಾಗಿದೆ. ಈ ಕಾರ್ಖಾನೆಯನ್ನು ವ್ಯಕ್ತಿಯೊಬ್ಬರು ಬಾಡಿಗೆಗೆ ಪಡೆದು ಅಲ್ಲಿ ಅಕ್ರಮವಾಗಿ ಪಟಾಕಿ ತಯಾರಿಕಾ ಘಟಕ ಆರಂಭಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕಾರ್ಖಾನೆಯೊಳಗೆ ಸಂಗ್ರಹಿಸಲಾಗಿದ್ದ ಗನ್‌ಪೌಡರ್ ಮತ್ತು ಕಾರ್ಡ್‌ಬೋರ್ಡ್‌ನ ದೊಡ್ಡ ದಾಸ್ತಾನು ಭಾರಿ ಸ್ಫೋಟದ ನಂತರ ಬೆಂಕಿಗೆ ಆಹುತಿಯಾಗಿ ಬೆಂಕಿ ತೀವ್ರವಾಗಿ ಹರಡಿತು. ಹತ್ತಿರದ ಕಾರ್ಖಾನೆಗಳಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ಅನಾಹುತ ತಡೆಗಟ್ಟಲು ತಾತ್ಕಾಲಿಕವಾಗಿ ವಿದ್ಯುತ್ ಕಡಿತಗೊಳಿಸಲಾಗಿದೆ.
ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತಂದಿವೆ. ಪೊಲೀಸ್ ಪಟ್ರೋಲ್ ವಾಹನವೂ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಳ್ಳುವುದನ್ನು ಗಮನಿಸಿತ್ತು. ಪೊಲೀಸರು ಮತ್ತು ಆಡಳಿತ ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡರು. ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಿಯಂತ್ರಣಕ್ಕೆ ತರಲಾಯಿತು. ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಕಾರ್ಮಿಕರು ಉತ್ತರ ಪ್ರದೇಶ ಮತ್ತು ಬಿಹಾರ ನಿವಾಸಿಗಳಾಗಿದ್ದು ಇನ್ನೂ ಇಬ್ಬರು ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಿವಾಂಡಿಯ ಹೆಚ್ಚುವರಿ ಜಿಲ್ಲಾ ಅಧಿಕಾರಿ ಸುಮಿತ್ರಾ ಮಿಶ್ರಾ ಮಾಹಿತಿ ನೀಡಿದ್ದಾರೆ.
ಕಾರ್ಖಾನೆ ಹಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿತ್ತು ಎಂದು ಅಗ್ನಿಶಾಮಕ ಠಾಣೆಯ ಉಸ್ತುವಾರಿ ರಾಜು ಖಾನ್ ತಿಳಿಸಿದ್ದಾರೆ. ಆವರಣದೊಳಗೆ ದೊಡ್ಡ ಪ್ರಮಾಣದ ಕಾರ್ಡ್‌ಬೋರ್ಡ್ ಸ್ಟಾಕ್ ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ.


