ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಶೃಂಗಸಭೆಗೆ ಮಂಗಳವಾರ ರಾಜಧಾನಿ ದೆಹಲಿಯಲ್ಲಿ ನಡೆಯಲಿದ್ದು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸುಳಿವನ್ನು ಗಣರಾಜ್ಯೋತ್ಸವದಂದು ನೀಡಿವೆ.
ದೆಹಲಿಯಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವದ ಪರೇಡ್ ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಯುರೋಪಿಯನ್ ಒಕ್ಕೂಟಗಳ ಮುಖಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಔಪಚಾರಿಕ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಪರೋಕ್ಷವಾಗಿ ಅಮೆರಿಕಕ್ಕೆ ತಿರುಗೇಟು ನೀಡುವ ಸುಳಿವು ನೀಡಿದ್ದಾರೆ.
ಭಾರ ಮತ್ತು ಯುರೋಪಿಯನ್ ಒಕ್ಕೂಟಗಳ ನಡುವಣ ಮುಕ್ತ ವಾಣಿಜ್ಯ ಒಪ್ಪಂದದ (FTA) ಕುರಿತು ಅಂತಿಮ ರೂಪ ನೀಡಲಾಗುತ್ತಿದ್ದರೂ ಇನ್ನೂ ಕೆಲವು ತಾಂತ್ರಿಕ ವಿಷಯಗಳು ಬಾಕಿ ಉಳಿದಿದ್ದು ಅವುಗಳನ್ನು ಸರಿ ಹೊಂದಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಂಗಳವಾರ ಶೃಂಗಸಭೆಯಲ್ಲಿ ಅಧಿಕೃತ ಘೋಷಣೆಗಳು ಹೊರಬೀಳಲಿವೆ.
ಮುಖ್ಯವಾಗಿ ಯುರೋಪಿಯನ್ ಒಕ್ಕೂಟದ ವಾಹನಗಳ ಮೇಲೆ ಭಾರತ ಪ್ರಸ್ತುತ ಶೇ.110ರಷ್ಟು ತೆರಿಗೆ ವಿಧಿಸುತ್ತಿದೆ. ಈ ತೆರಿಯನ್ನು ಶೇ.40ಕ್ಕೆ ಕಡಿತಗೊಳಿಸಲಿದ್ದು, ಇದರಿಂದ ಶೇ.70ರಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ.
ಕಳೆದ ವಾರ ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಘೋಷಿಸಿದ್ದರು. ಇದು ಎರಡೂ ಆರ್ಥಿಕತೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಮಹತ್ವದ ವಾಣಿಜ್ಯ ಒಪ್ಪಂದಗಳಲ್ಲಿ ಒಂದಾಗಬಹುದು ಎಂದು ಅವರು ವಿಶ್ಲೇಷಣೆ ಕೂಡಾ ಮಾಡಿದ್ದರು.
ಭಾರತಕ್ಕೆ ಭೇಟಿ ನೀಡಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೋ ಕೋಸ್ಟಾ ಸೇರಿದಂತೆ ಹಿರಿಯ EU ನಾಯಕರು ಒಪ್ಪಂದಗಳ ಕುರಿತು ಮಾತುಕತೆ ಅಂತಿಮಗೊಳಿಸುವತ್ತ ಒತ್ತು ನೀಡಿದ್ದಾರೆ.
ರಾಜಕೀಯ ಉದ್ದೇಶವನ್ನು ಅರಿತು ಉರ್ಸುಲಾ ವಾನ್ ಡೆರ್ ಲೇಯೆನ್ ಸಾಮಾಜಿಕ ಮಾಧ್ಯಮದಲ್ಲಿ ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್ ಎಂದು ಬಣ್ಣಿಸಿದ್ದಾರೆ. ಜನವರಿ 24, 2026ರಂದು X ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದ ಅವರು, ನಾವು EU – ಭಾರತ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಹತ್ತಿರ ಬರುತ್ತಿದ್ದೇವೆ. ದೆಹಲಿಯಲ್ಲಿ ಶೀಘ್ರದಲ್ಲೇ ಭೇಟಿಯಾಗೋಣ ಎಂದು ಬರೆದುಕೊಂಡಿದ್ದರು. ಇದು ದೀರ್ಘಕಾಲದಿಂದ ಬಾಕಿ ಇದ್ದ ಒಪ್ಪಂದ ಅಂತಿಮ ಹಂತಕ್ಕೆ ಬರುತ್ತಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.
ಭಾರತಕ್ಕೆ ಆಗಮಿಸಿದ ಬಳಿಕ ಈ ಬಗ್ಗೆ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಇಂದು ಭಾರತದಲ್ಲಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಭಾರತ ಮತ್ತು ಯುರೋಪ್ ಸ್ಪಷ್ಟ ಆಯ್ಕೆ ಮಾಡಿಕೊಂಡಿವೆ. ಕಾರ್ಯತಂತ್ರದ ಸಾಖ್ಯತೆ, ಸಂವಾದ ಮತ್ತು ಮುಕ್ತತೆಯ ಆಯ್ಕೆ. ನಮ್ಮ ಪೂರಕ ಶಕ್ತಿಗಳನ್ನು ಬಳಸಿಕೊಂಡು ಪರಸ್ಪರ ಸ್ಥಿರತೆಯನ್ನು ನಿರ್ಮಿಸುತ್ತಿದ್ದೇವೆ. ಒಡದು ಹೋಗಿರುವ ಜಗತ್ತಿಗೆ ಬೇರೆ ದಾರಿ ಸಾಧ್ಯ ಎಂಬುದನ್ನ ತೋರಿಸುತ್ತಿದ್ದೇವೆ ಬರೆದು ಕೊಂಡಿದ್ದಾರೆ.
ಭಾರತದಿಂದ ಇಯುಗೆ ಆಗುವ ರಫ್ತು ಪ್ರಮಾಣ ಎಷ್ಟು?
ರಫ್ತು ಭಾಗದಲ್ಲಿ ಭಾರತವು EUಗೆ 75.9 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರವಾನಿಸಿದೆ. ಇದರಲ್ಲಿ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್, ಬಟ್ಟೆಗಳು ಮತ್ತು ಇತರ ಕಾರ್ಮಿಕ-ಆಧಾರಿತ ಉತ್ಪನ್ನಗಳು ಪ್ರಮುಖವಾಗಿವೆ. ಸ್ಮಾರ್ಟ್‌ಫೋನ್‌ಗಳು, ಟೆಕ್ಸ್‌ಟೈಲ್‌ಗಳು, ರಾಸಾಯನಿಕಗಳು, ಉಕ್ಕು, ಔಷಧಗಳು ಮತ್ತು ಆಟೋ ಘಟಕಗಳು ಇದರ ಮೂಲವಾಗಿವೆ. ಇದು ಭಾರತದ ಸಂಸ್ಕರಣೆ, ಅಸೆಂಬ್ಲಿ ಮತ್ತು ಸ್ಕೇಲ್ ಉತ್ಪಾದನೆಯ ಶಕ್ತಿಯನ್ನು ತೋರಿಸುತ್ತದೆ.
ಈ ವಾಣಿಜ್ಯ ಹರಿವುಗಳು ಪೂರಕ ಸಂಬಂಧವನ್ನು ತೋರಿಸುತ್ತವೆ. ಯುರೋಪಿಯನ್ ತಂತ್ರಜ್ಞಾನ ಮತ್ತು ಇನ್‌ಪುಟ್‌ಗಳು ಭಾರತದ ಉದ್ಯಮಕ್ಕೆ ಬೆಂಬಲ ನೀಡುತ್ತವೆ. ಭಾರತದ ರಫ್ತುಗಳು ಯುರೋಪ್ ದೀರ್ಘಕಾಲದಿಂದ ಬಿಟ್ಟಿರುವ ಕ್ಷೇತ್ರಗಳ ಬೇಡಿಕೆಯನ್ನು ಪೂರೈಸುತ್ತವೆ ಎಂದು ವರದಿ ಹೇಳುತ್ತದೆ.
ಒಪ್ಪಂದದಿಂದ ಆಗುವ ಪ್ರಯೋಜನಗಳೇನು?:
GTRI ಸ್ಥಾಪಕ ಅಜಯ್ ಶ್ರೀವಾಸ್ತವ್ ಅವರ ಹೇಳುವ ಪ್ರಕಾರ, ಭಾರತ-EU ನಡುವಣ ವ್ಯಾಪಾರವನ್ನ ಪಾಲುಗಾರಿಕೆಯ ಸ್ಪರ್ಧೆಯಾಗಿ ಅಲ್ಲ, ಉತ್ಪಾದನಾ ಸಾಖ್ಯತೆಯಾಗಿ ಅರ್ಥೈಸಬೇಕು. ಯುರೋಪಿಯನ್ ಯಂತ್ರೋಪಕರಣಗಳು, ಘಟಕಗಳು ಮತ್ತು ನಿಖರ ಇನ್‌ಪುಟ್‌ಗಳು ಭಾರತದ ಕಾರ್ಖಾನೆಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಭಾರತದ ಸ್ಕೇಲ್ ಉತ್ಪಾದನೆಯು ಯುರೋಪ್‌ಗೆ ಕೈಗೆಟುಕುವ, ಗ್ರಾಹಕ-ಸಿದ್ಧ ಉತ್ಪನ್ನಗಳನ್ನು ಒದಗಿಸುತ್ತದೆ. ಎರಡೂ ಆರ್ಥಿಕತೆಗಳು ವಿಭಿನ್ನ ಭಾಗಗಳಲ್ಲಿ ವಿಶೇಷತೆ ಹೊಂದಿರುವುದರಿಂದ, ಸುಂಕ ರದ್ದತಿ ವೆಚ್ಚ ಕಡಿತದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದ್ದಾರೆ.


