ರಾಜ್ಯ ಸಾರಿಗೆ ಸಂಸ್ಥೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಚಾಲಕರೊಬ್ಬರು ಮ್ಯಾನೇಜರ್ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ–ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್‌ನಲ್ಲಿಯೇ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾರೆ.
ರಾಜಪ್ಪ ಆರು ಹೆಣ್ಣುಮಕ್ಕಳ ತಂದೆಯಾಗಿದ್ದು, ಶೀಘ್ರದಲ್ಲೇ ನಿವೃತ್ತಿ ಪಡೆಯಬೇಕಾಗಿದ್ದ ಅವರ ಜೀವನ ಹೀಗೆ ದುರಂತ ಅಂತ್ಯ ಕಂಡಿದೆ. ಆರೋಗ್ಯ ಸಮಸ್ಯೆ, ವಯಸ್ಸಿನ ತೊಂದರೆ ಹೇಳಿಕೊಂಡರೂ ಡಿಪೋ ಮ್ಯಾನೇಜರ್ ವಿಠ್ಠಲ್ ಬೋವಿ ಲೆಕ್ಕಿಸದೆ ನಿರಂತರ ಒತ್ತಡ ಮತ್ತು ಕಿರುಕುಳ ನೀಡುತ್ತಿದ್ದರು, ಇದರಿಂದ ನೊಂದು ರಾಜಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮ್ಯಾನೇಜರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಾಜಪ್ಪ ಕುಟುಂಬದವರು ಆಗ್ರಹಿಸಿದ್ದಾರೆ.
ರಾಜಪ್ಪ ಅವರಿಗೆ ಬೇಕಾದಾಗ ರಜೆ ನೀಡುತ್ತಿರಲಿಲ್ಲ, ಆರೋಗ್ಯ ಸಮಸ್ಯೆಯಿದ್ದರೂ ಇಲ್ಲದೆ ಅಧಿಕಾರಿಗಳು ಅವರನ್ನು ಪ್ರತಿದಿನವೂ ಬಸ್ಸು ಓಡಿಸಲು ಒತ್ತಾಯಿಸುತ್ತಿದ್ದರು. ದೂರದ ಮಾರ್ಗದಲ್ಲಿ ರಾಜಪ್ಪ ಒಬ್ಬರೇ ನಿರಂತರವಾಗಿ ಡ್ರೈವಿಂಗ್ ಮಾಡುತ್ತಿದ್ದರು. ಇದು ಅವರ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ರಾಜಪ್ಪ ಅವರಿಗೆ ಅಪಘಾತದಲ್ಲಿ ಕಾಲಿಗೆ ಗಾಯವಾಗಿತ್ತು. ಡ್ರೈವಿಂಗ್ ಮಾಡಲು ಆಗುತ್ತಿಲ್ಲ, ಬದಲಿಗೆ ಆಫೀಸ್ ಕೆಲಸ ಕೊಡಿ ಎಂದು ವಿನಂತಿಸಿಕೊಂಡರೂ ಮ್ಯಾನೇಜರ್‌ಗಳು ಗಮನ ನೀಡಲಿಲ್ಲ ಎಂದು ತಿಳಿದುಬಂದಿದೆ. ಕಾಲಿಗೆ ಗಾಯವಾಗಿದ್ದರೂ ಕೆಲಸಕ್ಕೆ ಬರುವಂತೆ ಒತ್ತಡ ಹಾಕಿದ್ದರಿಂದ ರಾಜಪ್ಪ ಮಾನಸಿಕವಾಗಿ ಹತಾಶರಾಗಿದ್ದರು ಎಂದು ಹೇಳಲಾಗಿದೆ.