ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ನ 18ರ ಆವೃತ್ತಿಯ ಮೊದಲ ಸೂಪರ್ ಓವರ್ ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ದೆಹಲಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 188 ರನ್ ಸಂಪಾದಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು.
ಮಿಚೆಲ್ ಸ್ಟಾರ್ಕ್ ಎಸೆತ ಕೊನೆಯ ಓವರ್ ನಲ್ಲಿ ರಾಜಸ್ಥಾನ್ 9 ರನ್ ಗಳಿಸಬೇಕಿತ್ತು. ಕೇವಲ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದರೂ ಸ್ಫೋಟಕ ಬ್ಯಾಟ್ಸ್ ಮನ್ ಹೆಟ್ಮೇಯರ್ ಮತ್ತು ಧ್ರುವ ಜುರೆಲ್ 8 ರನ್ ಗಳಿಸಲಷ್ಟೇ ಶಕ್ತವಾದರು. ಸ್ಟಾರ್ಕ್ ಒಂದೇ ಒಂದು ಬೌಂಡರಿ ಕೊಡದೇ ಕಡಿವಾಣ ಹಾಕಿದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 4 ಎಸೆತಗಳಲ್ಲಿ 11 ರನ್ ಗಳಿಸಿದ್ದಾಗಲೇ 2 ವಿಕೆಟ್ ಕಳೆದುಕೊಂಡು ಆಲೌಟಾಯಿತು. ರಾಜಸ್ಥಾನ್ ಮೊದಲ 3 ಎಸೆತಗಳಲ್ಲಿ 2 ಬೌಂಡರಿ ಪಡೆದರೂ ನಂತರದ 2 ಎಸೆತಗಳಲ್ಲಿ ಇಲ್ಲದ ರನ್ ಕದಿಯುವ ಯತ್ನದಲ್ಲಿ 2 ವಿಕೆಟ್ ಕಳೆದುಕೊಂಡಿತು. ಸ್ಟಾರ್ಕ್ ಒಂದು ನೋಬಾಲ್ ಎಸೆದರೂ 11 ರನ್ ಮಾತ್ರ ನೀಡಿದರು.
ನಂತರ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಅಖಾಡಕ್ಕೆ ಇಳಿದ ಸ್ಟಬ್ಸ್ ಮತ್ತು ಕೆಎಲ್ ರಾಹುಲ್ ಇಳಿದರು. ಡೆಲ್ಲಿ 2 ಎಸೆತಗಳು ಬಾಕಿ ಇರುವಂತೆಯೇ ರೋಚಕ ಜಯ ಸಾಧಿಸಿತು. ರಾಹುಲ್ 1 ಬೌಂಡರಿ ಸೇರಿದಂತೆ 7 ರನ್ ಬಾರಿಸಿದರೆ, ಸ್ಟಬ್ಸ್ ಒಂದು ಸಿಕ್ಸರ್ ಸಿಡಿಸಿ ರೋಚಕ ಜಯ ತಂದುಕೊಟ್ಟರು.
ರಾಜಸ್ಥಾನ್ ತಂಡ ಜೈಸ್ವಾಲ್ (51 ರನ್, 37 ಎಸೆತ, 3 ಬೌಂಡರಿ, 4 ಸಿಕ್ಸರ್) ಮತ್ತು ನಿತಿನ್ ರಾಣಾ (51 ರನ್, 28 ಎಸೆತ, 6 ಬೌಂಡರಿ, 2 ಸಿಕ್ಸರ್) ಅವರ ಅರ್ಧಶತಕಗಳ ನೆರವಿನಿಂದ ಸುಲಭ ಗೆಲುವಿನ ಭರವಸೆ ಮೂಡಿತ್ತು. ಆದರೆ ಕೊನೆಯ ಹಂತದಲ್ಲಿ ರನ್ ಗಳಿಸಲು ಪರದಾಡಿದ್ದರಿಂದ ತಂಡ ಕೊನೆಯ ಹಂತದಲ್ಲಿ ಎಡವಿ ಗೆಲುವಿನ ಗೆರೆ ದಾಟಲು ವಿಫಲವಾಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಭಿಷೇಕ್ ಪೊರಲ್ (49), ಕೆಎಲ್ ರಾಹುಲ್ (38), ಟ್ರಿಸ್ಟನ್ ಸ್ಟಬ್ಸ್ (34), ನಾಯಕ ಅಕ್ಸರ್ ಪಟೇಲ್ (34) ಮತ್ತು ಅಶುತೋಷ್ ಶರ್ಮ (ಅಜೇಯ 15) ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.