Thursday, January 15, 2026
Menu

ರಬಕವಿಬನಹಟ್ಟಿಯಲ್ಲಿ ಆಸ್ತಿಗಾಗಿ ಅಣ್ಣನ ಮಕ್ಕಳಿಂದ ದಾನಕ್ಕೆ ಹೆಸರಾದ ದಾನಜ್ಜಿಯ ಕೊಲೆ

ಬಾಗಲಕೋಟೆಯ ರಬಕವಿಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ 80 ವರ್ಷದ ದಾನಜ್ಜಿ (ಚಂದ್ರವ್ವ ನೀಲಗಿ) ಅವರನ್ನು 11 ಎಕರೆ ಆಸ್ತಿಗಾಗಿ ಅಣ್ಣನ ಮಕ್ಕಳೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ದಾನಜ್ಜಿ ತೇರದಾಳದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿ ಬಾಗಿಲು ದಾನ ಮಾಡಿದ್ದರು. ಇವರ ಕೊಲೆಗೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.

ದಾನಜ್ಜಿ ಜೀವನದುದ್ದಕ್ಕೂ ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. 60 ವರ್ಷಗಳಿಂದ ತೇರದಾಳದ ಪ್ರಭುಲಿಂಗೇಶ್ವರ ದೇವಸ್ಥಾನದ ಬಳಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅವರು ಕೂಡಿಟ್ಟ ಹಣದಿಂದ ಅನೇಕ ದಾನ ಕಾರ್ಯಗಳನ್ನು ಮಾಡಿದ್ದರು. 2022ರಲ್ಲಿ ಪ್ರಭುಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಗೆ 20 ಕೆಜಿ ತೂಕದ 16 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಬಾಗಿಲನ್ನು ದಾನ ಮಾಡಿದ್ದರು. ದೇವಸ್ಥಾನದಲ್ಲಿ ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಠಡಿ ನಿರ್ಮಿಸಿಕೊಟ್ಟಿದ್ದರು. ಅವರ ದಾನ-ಧರ್ಮಗಳ ಕಾರಣ ದಾನಜ್ಜಿ ಎಂಬ ಹಸರು ಬಂದಿದೆ.

ದಾನಜ್ಜಿ ಮತ್ತು ಅವರ ಅಣ್ಣನ ಮಕ್ಕಳ ನಡುವೆ 11 ಎಕರೆ ಆಸ್ತಿಯ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದವು. ಜನವರಿ 13ರಂದು ಸರ್ವೆ ಅಧಿಕಾರಿಗಳು ದಾನಜ್ಜಿ ಅವರ ಹೊಲದ ಭೂಮಿಯ ಸರ್ವೆಗಾಗಿ ಬಂದಿದ್ದರು. ಅಜ್ಜಿ ಘಟಪ್ರಭಾ ಕಾಲುವೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿ ನಂತರ ರಕಷಿಸುವ ನಾಟಕ ಆಡಿ ಕಾಡಯ್ಯ ಬನಹಟ್ಟಿ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿಂದ ಗೋಕಾಕ ಆಸ್ಪತ್ರೆಗೆ ಕರೆಕೊಂಡು ಹೋಗುತ್ತೇವೆಂದು ಕರೆದೊಯ್ದಿದ್ದ ಆರೋಪಿಗಳು ಕೊಲೆ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆ ಮಾಡಿದ ಆರೋಪಿಗಳು ಶವವನ್ನು ಆತುರವಾಗಿಸಂಸ್ಕಾರ ಮಾಡಲು ಪ್ರಯತ್ನಿಸಿದ್ದರು. ಇದು ಸ್ಥಳೀಯರಲ್ಲಿ ಅನುಮಾನ ಹುಟ್ಟಿಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ. ರಬಕವಿಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐದು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆಂದು ಬಾಗಲಕೋಟೆ ಎಸ್​​ಪಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *