Thursday, October 16, 2025
Menu

ದಲಿತ ವ್ಯಕ್ತಿ ಮನೆಗೆ ಬೆಂಕಿ: ಜೀವ ಉಳಿಸಿದ ಮೊಬೈಲ್ ಚಾರ್ಜರ್!

koppal news

ಕೊಪ್ಪಳ: ದಲಿತ ವ್ಯಕ್ತಿಯ ಮನೆಗೆ ಕಿಡಿಗೇಡಿಗಳು ಹಳೇ ವೈಷಮ್ಯದಿಂದ ಬೆಂಕಿ ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ನಡೆದಿದೆ.

ಗುರುವಾರ‌ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಮೊಬೈಲ್ ಚಾರ್ಜರ್ ನಿಂದಾಗಿ ಮನೆಯೊಳಗಿದ್ದ ವ್ಯಕ್ತಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೇ ಪಾರಾಗಿದ್ದಾರೆ.

ದಲಿತನ ಮನೆಯ ಮುಂಭಾಗಕ್ಕೆ ಬೆಂಕಿ ಬಿದ್ದ ಘಟನೆ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದೆ. ಈ ಹಿಂದೆ ಇಂಥದ್ದೇ ಪ್ರಕರಣ ಜಿಲ್ಲೆಯ ಮರಕುಂಬಿಯಲ್ಲಿ ನಡೆದಿತ್ತು. ಸವರ್ಣೀಯರು ಆರೋಪಿಗಳಾಗಿದ್ದರು. ಈಚೇಗಷ್ಟೇ ಮರಕುಂಬಿ ಪ್ರಕರಣದ ತೀರ್ಪು ಪ್ರಕಟವಾಗಿತ್ತು. ಆದರೆ ಕೋನಸಾಗರ ಪ್ರಕರಣದಲ್ಲಿ ಮನೆಯ ಮುಂಭಾಗಕ್ಕೆ ಬೆಂಕಿ ಬಿದ್ದಿರಲು ಸವರ್ಣೀಯರು ಕಾರಣರಲ್ಲ ಎಂಬುದು ಸಮಾಧಾನದ ಸಂಗತಿ. ಅಚ್ಚರಿಯ ವಿಷಯವೆಂದರೆ ದಲಿತ ವ್ಯಕ್ತಿಯ ಮನೆಗೆ ಬೆಂಕಿ ಹೊತ್ತಲು ಪರಿಶಿಷ್ಟ ಪಂಗಡದ ವ್ಯಕ್ತಿ ಕಾರಣ ಎಂದು ಎಫ್ಐಆರ್‌ನಲ್ಲಿ ದಾಖಲಿಸಲಾಗಿದೆ.

ಮೊಬೈಲ್ ಚಾರ್ಜ್ ಹಾಕುವಾಗ ಕಂಡ ಬೆಂಕಿ

ಕೋನಸಾಗರ ಗ್ರಾಮದ ದಲಿತ ವ್ಯಕ್ತಿ ಮಣಿಕಂಠಯ್ಯ‌ ಹರಿಜನ ಎಂಬುವವರ ಸ್ವಂತ ಮನೆ ದುರಸ್ತಿಯಲ್ಲಿ‌ ಇರುವುದರಿಂದ ಗ್ರಾಮದಲ್ಲೇ ತಮ್ಮ ಹೊಲಕ್ಕೆ ಹೊಂದಿಕೊಂಡಿರುವ ಮನೆಯೊಂದನ್ನು ಬಾಡಿಗೆ ಪಡೆದಿದ್ದರು. ಬಾಡಿಗೆ ಮನೆಯಲ್ಲಿ ‌ನಿತ್ಯ‌ ಮಣಿಕಂಠಯ್ಯನ ಮಾವ ಮೌನೇಶ್ ಮಲಗುತ್ತಿದ್ದರು. ಆದರೆ ಬುಧವಾರ ರಾತ್ರಿ ಊಟದ ಬಳಿಕ ಮಣಿಕಂಠಯ್ಯ ಬಾಡಿಗೆ ಮನೆಯಲ್ಲಿ ಮಲಗಿದರು. ನಸುಕಿನ ವೇಳೆ ಮೊಬೈಲ್ ಚಾರ್ಜ್ ಹಾಕುವಾಗ ಮನೆಯ ಮುಂಭಾಗದಲ್ಲಿ ಬೆಂಕಿ ಹೊತ್ತಿರುವುದು ಕಂಡಿದೆ. ಗಾಬರಿಯಾದ ಮಣಿಕಂಠಯ್ಯ ಕೂಡಲೇ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಸ್ನೇಹಿತ ತಕ್ಷಣವೇ ಧಾವಿಸಿ ಚೀಲಕ‌ ತೆಗೆದು‌ ಮಣಿಕಂಠಯ್ಯನನ್ನು ಹೊರಗೆ ಎಳೆದು ತಂದಿದ್ದಾನೆ. ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ.

ಮಣಿಕಂಠಯ್ಯನ ಕೂಗಾಟ‌ ಕೇಳಿ ಸ್ಥಳಕ್ಕೆ ಮಾವ ಮೌನೇಶ ಬಂದಾಗ ನಾಲ್ಕಾರು‌ ಜನರ ಗುಂಪು ಓಡಿ ಹೋಗಿದ್ದು, ಅವರನ್ನು ಗುರುತಿಸಲಾಗಲಿಲ್ಲ. ದಲಿತ ಸಮುದಾಯದಲ್ಲಿ ಮುಖಂಡನಾಗಿ ಗುರುತಿಸಲ್ಪಡುವ ನನ್ನ ಏಳ್ಗೆ ಸಹಿಸದ ಪರಿಶಿಷ್ಟ ಪಂಗಡದ ಹನುಮಂತಪ್ಪ ಜೂಲಕಟ್ಟಿ‌ ಮತ್ತು ಆತನ ಮಕ್ಕಳಾದ ಭೀಮಪ್ಪ, ನಾಗಪ್ಪ ಸಂಗಡಿಗರು ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ದಿನಗಳಿಂದ ನಮ್ಮ ಮೇಲೆ ಜೂಲಕಟ್ಟಿ ಕುಟಬದವರಿಗೆ ವೈಷಮ್ಯವಿದ್ದು, ದ್ವೇಷದಿಂದ ರಾತ್ರಿ‌ ಮನೆಯಲ್ಲಿ ನಾನೇ ಮಲಗಿರುವುದಾಗಿ ಊಹಿಸಿ ಬೆಂಕಿ ಹಚ್ಚಿರಬಹುದು ಎಂದು ಮೌನೇಶ್, ದಾಖಲಾಗಿರುವ ಪ್ರಕರಣದಲ್ಲಿ ತಿಳಿಸಿದ್ದಾರೆ. ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಕ್ರಮ‌ ಕೈಗೊಳ್ಳುವಂತೆ ಮೌನೇಶ್ ಮತ್ತು ಮಣಿಕಂಠಯ್ಯ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *