ಸಂಡೂರು ತಾಲೂಕು ಇನ್ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಇನ್ಸ್ಪೆಕ್ಟರ್ ಮಹೇಶ್ ಗೌಡ ಕ್ಷುಲ್ಲಕ ಕಾರಣಕ್ಕೆ ವಿವೇಕಾನಂದ್ ಎಂಬವರಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ವಿವೇಕಾನಂದ್ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.
ಆಗಸ್ಟ್ 24 ರಂದು ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿಯಾಗಲು ಸಂಡೂರು ಐಬಿಗೆ ವಿವೇಕಾನಂದ್ ಸಂಡೂರಿಗೆ ಹೋಗಿದ್ದರು. ಈ ವೇಳೆ ಸಚಿವರನ್ನು ಭೇಟಿ ಮಾಡಲು ಬಿಡದೆ ಬಾಯಿಗೆ ಬಂದಂತೆ ಇನ್ಸ್ಪೆಕ್ಟರ್ ಮಹೇಶಗೌಡ ಬೈದಿದ್ದು, ಇದನ್ನು ಪ್ರಶ್ನೆ ಮಾಡಿದಕ್ಕೆ ವಿವೇಕಾನಂದ್ ಮೇಲೆ ಬೇಕಾಬಿಟ್ಟಿ ಹಲ್ಲೆ ಮಾಡಿದ್ದರು.
ಇನ್ಸ್ಪೆಕ್ಟರ್ ಮಹೇಶ್ ಗೌಡ ದಬ್ಬಾಳಿಕೆ ವಿರುದ್ಧ ದೂರು ನೀಡಿದರೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೆಂದು ದೂರಿ, ತನ್ನ ಮೇಲೆ ನಡೆದ ಹಲ್ಲೆ ಸಂಬಂಧ ಮೆಡಿಕಲ್ ರಿಪೋರ್ಟ್ ಜೊತೆ ವಿವೇಕಾನಂದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ದಾಖಲೆ ಹಾಗೂ ವಾದ ಆಲಿಸಿ ಸಂಡೂರು ಇನ್ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಹೈಕೋರ್ಟ್ ಸೂಚನೆ ನೀಡಿದೆ.


