ಹೈದ್ರಾಬಾದ್ನಲ್ಲಿ ವಂಚನೆ ಪ್ರಕರಣದಲ್ಲಿ ಪೊಲೀಸ್ ಠಾಣೆಯೊಂದರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ದಂಪತಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ನಲ್ಲಿ 23 ಕೋಟಿ ರೂಪಾಯಿ ವಂಚನೆ ಮಾಡಿ ಪೊಲೀಸ್ ಕಸ್ಟಡಿಯಿಂದಲೇ ತಪ್ಪಿಸಿಕೊಂಡು ಬಂದಿದ್ದ ವಂಚಕ ದಂಪತಿಯನ್ನು ಬಂಧಿಸಿದ ಧಾರವಾಡ ಪೊಲೀಸರು ಹೈದರಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಂಚಕರು ಧಾರವಾಡ ಬೈಪಾಸ್ ಮೂಲಕ ರಾಮದುರ್ಗದತ್ತ ಹೊರಟಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತೀಶ್, ಶಿಲ್ಪಾ ಬಂಧಿತ ವಂಚಕ ದಂಪತಿ. ಹೈದ್ರಾಬಾದ್ನಲ್ಲಿ ಹಲವರಿಗೆ ವಂಚನೆ ಮಾಡಿ ಪರಾರಿಯಾಗಿದ್ದರು.
ಹೈದ್ರಾಬಾದ್ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಮಾಜಿ ಕೇಂದ್ರ ಸಚಿವ ಪಿ.ಶಿವಕುಮಾರ್ ಮಗ ಪಿ. ವಿನಯಕುಮಾರ್ ಅವರಿಗೆ ದಂಪತಿ ವಂಚನೆ ಮಾಡಿದ್ದರು. ಪಿ.ವಿನಯಕುಮಾರ್ ಕಳೆದ ಅಕ್ಟೋಬರ್ 18ರಂದೇ ಹೈದ್ರಾಬಾದ್ ಸೆಂಟ್ರಲ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
20ರಂದು ಸಂಜೆ 5:30ಕ್ಕೆ ವಂಚನೆ ಪ್ರಕರಣದ ದಂಪತಿ ನಿಮ್ಮ ವ್ಯಾಪ್ತಿಯಲ್ಲಿ ಇದ್ದಾರೆ ಎಂದು ತೆಲಂಗಾಣದ ಪೊಲೀಸರು ತಿಳಿಸಿದರು. ಆ ಮಾಹಿತಿ ಆಧರಿಸಿ ಮೂರು ಕಡೆ ಚೆಕ್ ಪೋಸ್ಟ್ ಹಾಕಿದ್ದೆವು. ನಮ್ಮ ಅಧಿಕಾರಿಗಳು ಅಲ್ಲಿ ಕರ್ತವ್ಯದಲ್ಲಿದ್ದರು. ನಮಗೆ ಸಿಕ್ಕ ಫೋನ್ ಲೋಕೇಷನ್ ಬೇಸಿಸ್ ಮೇಲೆ ಅವರನ್ನು ನಾವು ಟ್ರೇಸ್ ಮಾಡಿದೆವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದ್ದಾರೆ. ಶೆಲ್ ಕಂಪನಿಯ ಮೂಲಕ ಹಣವನ್ನು ಸಾಗಿಸುವಾಗ ವಂಚನೆಯಾಗಿದೆ. ಆರೋಪಿಗಳನ್ನು ಮ್ಯಾಜಿಸ್ಟೇಟ್ರ ಮುಂದೆ ಹಾಜರುಪಡಿಸಿ, ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಹೇಳಿದ್ದಾರೆ.


