ಕೊಡಗಿನ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಬಲಿಯಾದ ಘಟನೆ ನಡೆದಿದೆ. ಕಾಯಿಮಾನಿ ನಿವಾಸಿ ರತ್ತು ಆನೆ ದಾಳಿಗೆ ಬಲಿಯಾದವರು ಎಂದು ಗುರುತಿಸಲಾಗಿದೆ.
ಬೆಳಗ್ಗೆ ರತ್ತು ಅವರು ಕುರ್ಚಿ-ಕಾಯಿಮಾನಿ ನಡುವೆ ಇರುವ ಕಾಫಿ ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ. ಶ್ರೀಮಂಗಲ ಹೋಬಳಿಯ ಕುರ್ಚಿ ಮತ್ತು ಕಾಯಿಮಾನಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುಮಾರು 8 ರಿಂದ 10 ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಹಗಲು ಹೊತ್ತಿನಲ್ಲೇ ಆನೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಾಗೂ ಬೆಳೆಗಾರರು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಆನೆಗಳ ಹಿಂಡನ್ನು ಕಾಡಿಗಟ್ಟಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಕಲೇಶಪುರದಲ್ಲಿ ಕಾರು ಅಪಘಾತ: ವ್ಯಕ್ತಿ ಗಂಭೀರ ಗಾಯ
ಏಪ್ರಿಲ್ ಒಂಬತ್ತರಂದು ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲೆಂದು ತೆರಳುತ್ತಿದ್ದಾಗ ಕಾರು ಅಪಘಾತಗೊಂಡು ವ್ಯಕ್ತಿ ಗಂಭಿರವಾಗಿ ಗಾಯಗೊಂಡ ಘಟನೆ ಸಕಲೇಶಪುರದ ಮಳಲಿ ಬೈಪಾಸ್ ಬಳಿ ನಡೆದಿದೆ.
ಅಬ್ದುಲ್ ಖಾದರ್ ಗಾಯಗೊಂಡವರು. ಅವರು ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದು, ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ರಸ್ತೆಯಿಂದ ಕೆಳಗೆ ಹಾರಿದೆ. ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


