Menu

ಡಿಕೆ ಶಿವಕುಮಾರ್‌ ಮೇಲೆ ನಿಗಾಗೆ ಸಿಎಂ ತಂಡ: ಅತೃಪ್ತ ಆತ್ಮಗಳ ಹತಾಶ ಹೇಳಿಕೆಯೆಂದ ಸಿದ್ದರಾಮಯ್ಯ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ಪ್ರತಿ ಪಕ್ಷದ ನಾಯಕ ಆರ್‌ ಅಶೋಕ  ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಯವರ ಆರೋಪ ‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು  ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ಪ್ರತಿಪಕ್ಷದ ಪಕ್ಷದ ನಾಯಕರು ನನ್ನ ಮತ್ತು ಡಿಕೆಶಿವಕುಮಾರ್  ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ ಎಂದಿದ್ದಾರೆ.

ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲಿ ಕೂಡಾ ಗುಪ್ತಚರ ವಿಭಾಗ ಮುಖ್ಯಮಂತ್ರಿಯವರ ಬಳಿಯೇ ಇತ್ತು. ಅವರ ಹೇಳಿಕೆಗಳನ್ನು ಗಮನಿಸಿದರೆ ಇವರಿಬ್ಬರೂ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡುತ್ತಿರುವಂತೆ ಕಾಣಿಸುತ್ತಿದೆ ಎಂದು ಸಿಎಂ ಕಿಡಿ ಕಾರಿದ್ದಾರೆ.

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಧಾನಿ ಎದುರು ಬಾಯಿ ಬಿಡಲಾಗದೆ ಕೈಕಾಲು ನಡುಗುವಂತಹ ಸ‍್ಥಿತಿ ಇರುವ ಬಿಜೆಪಿಯೂ ಅಲ್ಲ, ಏಕ ಕುಟುಂಬದ ಅಧಿಪತ್ಯ ಇರುವ ಜೆಡಿಎಸ್ ಕೂಡಾ ಅಲ್ಲ. ನಮ್ಮ ಶಾಸಕರು ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಯಾವ ಶಾಸಕರು ಏನನ್ನೇ ಹೇಳಿದರೂ ಅಂತಿಮವಾಗಿ ಅವರನ್ನೂ ಸೇರಿದಂತೆ ನಾನು ಮತ್ತು ಶಿವಕುಮಾರ್ ನಮ್ಮ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು. ಇದನ್ನು ನಾವಿಬ್ಬರೂ ಒಂದಲ್ಲ ನೂರು ಬಾರಿ ಹೇಳಿದ್ದೇವೆ. ಇದೇ ಅಂತಿಮ ಸತ್ಯ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳನ್ನು ಹರಡಿ ನಮ್ಮಿಬ್ಬರ ಸಂಬಂಧವನ್ನು ಕೆಡಿಸಿ ಡಿಕೆಶಿವಕುಮಾರ್ ಅವರನ್ನು ಒಲಿಸಿಕೊಳ್ಳುವ ದುರಾಲೋಚನೆ ಏನಾದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ದರೆ ಅವರ ಹಗಲು ಕನಸುಗಳಿಗೆ ಶುಭ ಹಾರೈಸುತ್ತೇನೆ. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ, ಸುಳ್ಳು ಕೇಸ್ ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು ಎನ್ನುವುದು ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ ಎಂದಿದ್ದಾರೆ.

ಕರ್ನಾಟಕದ  ರಾಜಕೀಯ ಇತಿಹಾಸದ ಪುಟಗಳ ಮೇಲೆ  ಕಣ್ಣಾಡಿಸಿದರೆ  ಪೋನ್ ಕದ್ದಾಲಿಕೆ, ಗೂಢಚರ್ಯೆಗಳೆಲ್ಲ ಯಾವ ಪಕ್ಷದ ದುಷ್ಕೃತ್ಯಗಳು ಎನ್ನುವುದು ಅರಿವಾಗುತ್ತದೆ. 2004ರಿಂದ 2013 ವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ರಾಜ್ಯ ಐದು ಮುಖ್ಯಮಂತ್ರಿಗಳನ್ನು, 2018ರಿಂದ 2023ರ 5 ವರ್ಷಗಳ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ಕಾಣುವಂತಾಗಲು ಇವರೊಳಗಿನ ಪರಸ್ಪರ ಅಪನಂಬಿಕೆ, ದ್ವೇಷ, ಅಸೂಯೆ, ಬೆನ್ನಿಗೆ ಚೂರಿ ಹಾಕುವ ಕುತಂತ್ರಗಳೇ ಕಾರಣ ಎಂದು ವಿವರಿಸಿದರು.

2018ರಲ್ಲಿ ಹೆಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳ ಫೋನ್‌  ಕದ್ದಾಲಿಸಿದ್ದಾರೆ ಎಂದು ಈಗಿನ ಅವರ ರಾಜಕೀಯ ಸಂಗಾತಿ ಬಿ.ವೈ ವಿಜಯೇಂದ್ರ ಅವರೇ ಆರೋಪ ಮಾಡಿದ್ದರು. ತನಿಖೆ ಮಾಡಿದ್ದ ಸಿಬಿಐ ಏಳು ಸ್ವಾಮೀಜಿಗಳ ಫೋನ್ ಗಳ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ನಂಬಿಕೆಗೆ ತಾನು ಅರ್ಹ ಅಲ್ಲ ಎಂದು  ಕುಮಾರಸ್ವಾಮಿ ಸಾಬೀತು ಮಾಡಿದ್ದರು.  ಇಂತಹ ದುರ್ಬುದ್ದಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎನ್ನುವುದು ನೆನಪಿರಲಿ ಎಂದು ಟೀಕಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿ ಸರ್ಕಾರಿ ಯಂತ್ರಗಳ ಮೂಲಕವೇ ವಿರೋಧ ಪಕ್ಷದ ನಾಯಕರನ್ನು ಮಾತ್ರವಲ್ಲ, ಸ್ವಪಕ್ಷದಲ್ಲಿ ತಮ್ಮ ನಾಯಕತ್ವಕ್ಕೆ ಪೈಪೋಟಿ ನೀಡಬಲ್ಲ ನಾಯಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ. ಹಾಡಹಗಲೇ ಪೊಲೀಸ್, ಸಿಬಿಐ, ಇಡಿ, ಐಟಿ ಇಲಾಖೆಗಳ ದುರ್ಬಳಕೆಯಾಗುತ್ತಿರುವ ಬಗ್ಗೆ ಇಡೀ ದೇಶದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹವರು ತಮ್ಮ ರಾಜಕೀಯ ವಿರೋಧಿಗಳ ಫೋನ್‌ ಗಳನ್ನು ಕದ್ದು ಆಲಿಸದೆ ಬಿಡುತ್ತಾರೆಯೇ,  ಆದರೆ ಇಂತಹ ಬೆದರಿಕೆಗಳಿಗೆ ನಾನಾಗಲಿ, ನನ್ನ ಪಕ್ಷದ ಯಾವ ನಾಯಕರಾಗಲಿ ಜಗ್ಗುವವರಲ್ಲ, ಬಗ್ಗುವವರೂ ಅಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿಯವರಿಗೆ ಗೂಢಚರ್ಯೆಯ ಪಾಠವನ್ನು ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಗೂಡಚರ್ಯೆ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎಂದು ನೆನಪಿಸಿ ಕೊಂಡಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ ಮತ್ತು ಆರ್ ಅಶೋಕ್ ಈ ರೀತಿ ಕುಟಿಲ ರಾಜಕೀಯದಲ್ಲಿ ವ್ಯರ್ಥಮಾಡುವ ಬದಲಿಗೆ ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿ ರಾಜ್ಯಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ. ರಾಜ್ಯದ ಪ್ರಜ್ಞಾವಂತ ಮತದಾರರು ಐದು ವರ್ಷ ಸರ್ಕಾರ ನಡೆಸಲು ನಮಗೆ ಜನಾದೇಶ ನೀಡಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಕುತಂತ್ರ-ಕುಚೇಷ್ಠೆಗಳ ನಡುವೆಯೂ ಈ ಅವಧಿಯನ್ನು ಕಾಂಗ್ರೆಸ್ ಪಕ್ಷ ಪೂರ್ಣಗೊಳಿಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ ಎಂದು ಸಿಎಂ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *