ಬೆಂಗಳೂರು: ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆ ಬಗೆಹರಿಸಿಲ್ಲ. ರಸ್ತೆಗುಂಡಿಗಳನ್ನು ದುರಸ್ತಿ ಮಾಡಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ನಡುವಿನ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮ ಜಯಂತಿಯ ದಿನದಂದು ಎಲ್ಲೆಡೆ ಸಂಭ್ರಮದ ಆಚರಣೆ ನಡೆಯುತ್ತಿದ್ದರೆ, ಸದಾಶಿವನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಿಕೋಳಿಯ ಸಾರು ಸವಿದಿದ್ದಾರೆ. ಈ ಹಿಂದೆ ಅವರು ಮಾಂಸ ಸೇವಿಸಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಕೆಲವು ದಿನದ ಹಿಂದೆ ಸಿದ್ದರಾಮಯ್ಯ ಮನೆಯಲ್ಲಿ ಉಪಾಹಾರ ನಡೆದಿದ್ದರೆ, ಈಗ ಡಿ.ಕೆ.ಶಿವಕುಮಾರ್ ಮನೆಯಲ್ಲಿ ನಡೆದಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಈ ಪ್ರಹಸನವನ್ನು ನಿರ್ದೇಶನ ಮಾಡಿದ್ದಾರೆ. ಸಿದ್ದರಾಮಯ್ಯನವರ ಈ ನಡೆಯಿಂದ ಎಲ್ಲ ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ ಎಂದರು.
ನಾನು ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಈಗ ಅವರು ಉಪಾಹಾರ ಸವಿದಿದ್ದಾರೆ. ಈ ನಡುವೆ ಡಾ.ಜಿ.ಪರಮೇಶ್ವರ್ ಬಹಳ ನೋವಿನಿಂದ ಮಾತಾಡಿದ್ದಾರೆ. ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 580 ಕ್ಕೂ ಅಧಿಕ ಜನರು ರಸ್ತೆಗುಂಡಿಯಿಂದ ಸತ್ತಿದ್ದಾರೆ. ತಿಂಡಿ ತಿನ್ನುವ ಸಮಯವನ್ನು ರಸ್ತೆಗುಂಡಿ ಮುಚ್ಚಿಸಲು ವಿನಿಯೋಗಿಸಿದ್ದರೆ ಅಮಾಯಕ ಜೀವಗಳು ಉಳಿಯುತ್ತಿತ್ತು. ರೈತರ ಕಬ್ಬಿನ ದರದ ಸಮಸ್ಯೆ ಬಗೆಹರಿದಿಲ್ಲ. ಮೆಕ್ಕೆಜೋಳ ಖರೀದಿ ಕೇಂದ್ರದ ಸಮಸ್ಯೆ ಬಗೆಹರಿದಿಲ್ಲ. ಈ ಬಗ್ಗೆ ಯಾವುದೇ ಉಪಾಹಾರ ಸಭೆ ನಡೆಸಿಲ್ಲ. ಇವರಿಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ನಡೆಸಬೇಕಿತ್ತೇ? ಅಂಗನವಾಡಿ ಕಾರ್ಯಕರ್ತರು, ರೈತರು, ಉದ್ಯಮಿಗಳು, ದಲಿತರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ ಎಂದರು.
ಬಿಗ್‌ಬಾಸ್‌ನಲ್ಲಿ ವೈಲ್ಡ್ ಕಾರ್ಡ್‌ನಂತೆ ಸತೀಶ್ ಜಾರಕಿಹೊಳಿ ಹಾಗೂ ಡಾ.ಜಿ.ಪರಮೇಶ್ವರ್ ದಲಿತ ಬ್ರ್ಯಾಂಡ್‌ನಡಿ ಸಿಎಂ ಆಗಲು ಕಾಯುತ್ತಿದ್ದಾರೆ. ಇಡೀ ಸರ್ಕಾರ ರಿಯಾಲಿಟಿ ಶೋನಂತೆ ಆಗಿದೆ. ಈ ರೀತಿ ಸಭೆ ನಡೆಸುವ ಬದಲು, ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ದುರಸ್ತಿ ಮಾಡಿಸಲು 12 ಕೋಟಿ ರೂ. ಬಿಲ್ ಪಾವತಿಸಿದ್ದರೆ ರೈತರಿಗೆ ನೀರಾವರಿ ಲಭ್ಯವಾಗುತ್ತಿತ್ತು. ಈ ಬಗ್ಗೆ ರೈತರ ಪರವಾಗಿ ಅಧಿವೇಶನದ ಸಮಯದಲ್ಲಿ ಹೋರಾಟ ಮಾಡಲಾಗುವುದು ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾತ್ರ ಅಲ್ಲ, ಯಾವುದೇ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಸಿಎಂ ಸಿದ್ದರಾಮಯ್ಯ ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೊಟ್ಟ ಮಾತನ್ನು ಈಡೇರಿಸಲಾಗಿದೆಯೇ ಎಂದು ನಾವು ಪ್ರಶ್ನೆ ಮಾಡುತ್ತೇವೆ. ಧರ್ಮಸ್ಥಳದಲ್ಲಿ ಬುರುಡೆ ತಂದವನಿಗೆ ಬಿರಿಯಾನಿ ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರ. ಆದರೆ ಅದನ್ನು ಸಾಬೀತುಪಡಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂದರು.
ಬೆಂಗಳೂರಿನ ಬಗ್ಗೆ ಟೀಕೆ ಮಾಡಿದ ಉತ್ತರ ಪ್ರದೇಶದ ಸಂಸದರು ಭದ್ರತೆ ಹೆಚ್ಚು ಮಾಡಿಕೊಳ್ಳಬೇಕು. ಇಲ್ಲವಾದರೆ ಡಿ.ಕೆ.ಶಿವಕುಮಾರ್ ಅವರಿಗೂ ಬೆದರಿಕೆ ಹಾಕುತ್ತಾರೆ. ಈಗಾಗಲೇ ಉದ್ಯಮಿಗಳಿಗೆ ಬೆದರಿಕೆ ಹಾಕಲಾಗಿದೆ ಎಂದರು.


