ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ದೈವಾಧೀನರಾದ ಸುದ್ದಿ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ ಹೊಂದಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಶ್ರೀಗಳ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ, ಶ್ರೀ ಮಠದ ಭಕ್ತಾದಿಗಳು ಹಾಗೂ ಅಪಾರ ಅನುಯಾಯಿ ಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ದೈವಾಧೀನರಾದ ಸುದ್ದಿ ನೋವುಂಟುಮಾಡಿದೆ.
ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ ಹೊಂದಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ.ಶ್ರೀಗಳ… pic.twitter.com/YaU2lAf5zD
— Siddaramaiah (@siddaramaiah) January 15, 2026
ಸ್ವಾಮೀಜಿ ಜ.12, 13, 14 ರಂದು ಅದ್ಧೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ನಡೆಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರವನ್ನೂ ನಿರ್ವಹಿಸಿದ್ದರು. ರಾಜಕೀಯ ವ್ಯಕ್ತಿಗಳಿಂದ ಮುಕ್ತವಾದ ಕಾರ್ಯಕ್ರಮ ಇದಾಗಿತ್ತು. ಒಂದು ವಾರ ಸರಿಯಾಗಿ ಊಟ, ನಿದ್ದೆ ಮಾಡದೆ ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರಿಂದ ಬುಧವಾರ ರಾತ್ರಿ ಲೋ ಬಿಪಿಯಿಂದ ಸ್ವಾಮೀಜಿ ಬಳಲಿದ್ದರು. ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸಿದ್ದರಾಮಾನಂದ ಸ್ವಾಮೀಜಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರನಾಗಿದ್ದ ಅವರ ಮೂಲ ಹೆಸರು ಮೋಹನ್ ಪ್ರದಾನ ಆಗಿತ್ತು. ಶರಣ ಸಾಹಿತ್ಯದ ಜೊತೆಗೆ ಎಲ್ಲಾ ಧರ್ಮಗಳ ಅಧ್ಯಯನ ಮಾಡಿದ ಸ್ವಾಮೀಜಿ ಚಿತ್ರದುರ್ಗದ ಮುರುಘಾಮಠದಲ್ಲಿಲ ಅಧ್ಯಯನ ಬಳಿಕ ನಾಲ್ಕು ವರ್ಷ ಸಿಂಧನೂರಿನಲ್ಲಿ ಸ್ವಾಮೀಜಿಯಾಗಿ ವಾಸ್ತವ್ಯ ಮಾಡಿದರು. ಬಳಿಕ ದೇವದುರ್ಗದ ತಿಂಥಣಿ ಬ್ರಿಜ್ಡ್ ಹತ್ತಿರ 2011 ರಲ್ಲಿ ಕನಕಗುರು ಪೀಠಕ್ಕೆ ಬಂದ ಸಿದ್ದರಾಮನಂದ ಸ್ವಾಮೀಜಿ ಕಾಗಿನೆಲೆ ಕನಕ ಗುರುಪೀಠ ಸ್ಥಾಪನೆ ಮಾಡಿದರು.


