ಹಾವೇರಿಯಲ್ಲಿ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ಬಳಿಕ ದೀಪಾವಳಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ.
ಕೋಡಿಹಳ್ಳಿ ಹೆಸ್ಕಾಂ ನಿವೃತ್ತ ನೌಕರ, ದಾನೇಶ್ವರಿ ನಗರದ ಚಂದ್ರಶೇಖರ ಕೋಡಿಹಳ್ಳಿ (75) ಮನೆಗೆ ಹೊರಟಿದ್ದಾಗ ಬರೋಡಾ ಬ್ಯಾಂಕ್ ಎದುರುಗಡೆ ಹಿಂದಿನಿಂದ ಬಂದ ಹೋರಿ ಗುದ್ದಿದೆ. ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಹಾವೇರಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಿಹೊಸೂರು ಗ್ರಾಮದ ಘನಿಸಾಬ್ (75) ಎಂಬವರು ಹೋರಿ ತಿವಿದು ಮೃತಪಟ್ಟಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿ ಮನೆಗೆ ನುಗ್ಗಿ ಘನಿಸಾಬಗೆ ಹೋರಿ ತಿವಿದಿದೆ. ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾನಗಲ್ ತಾಲೂಕಿನ ತಿಳವಳ್ಳಿಯಲ್ಲಿ ಹೋರಿ ತಿವಿದು ಯುವಕ ಮೃತಪಟ್ಟ ಘಟನೆ ತಿಳವಳ್ಳಿ ಸಮೀಪದ ದುರ್ಗಾಂಬಿಕಾ ದಾಬಾ ಬಳಿ ಘಟನೆ ನಡೆದಿದೆ. ಗಾಯಾಳು ಭರತ್ ರಾಮಪ್ಪ ಹಿಂಗಮೇರಿ (24) ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಸು ನೀಗಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ದೀಪಾವಳಿಯಂದು ನಡೆಯುತ್ತದೆ. ಜಾತ್ರಾ ಸಮಿತಿ ಬಲಿಪಾಡ್ಯಮಿ ದಿನ ದನ ಬೆದರಿಸುವ ಸ್ಪರ್ಧೆ ಆಯೋಜಿಸುತ್ತದೆ. ಹಾವೇರಿ ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ರೈತರು ತಮ್ಮ ಹೋರಿಗಳನ್ನು ಸ್ಪರ್ಧೆಗೆ ಕರೆತಂದಿದ್ದರು. 300ಕ್ಕೂ ಅಧಿಕ ಕೊಬ್ಬರಿ ಹೋರಿಗಳು ಭಾಗಿಯಾಗಿದ್ದವು.