ಬೈಕ್ ಗೆ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿರುವ ಘಟನೆ ಶಿವಮೊಗ್ಗ ನಗರದ ಗುರುಪುರ ಬಳಿ ನಡೆದಿದೆ. ಕಾಟಿಕೆರೆ ಗ್ರಾಮದ 26 ವರ್ಷದ ಮಂಜುನಾಥ್ ಮೃತ ಯುವಕ.
ಹೊಳೆಹೊನ್ನೂರು ಕಡೆಯಿಂದ ಅತಿ ವೇಗವಾಗಿ ಬಂದ ಲಾರಿ ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಅಸು ನೀಗಿದ್ದಾನೆ. ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ
ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಸಾವು
ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಸುಂಟಿಕೊಪ್ಪದ ಪಂಪ್ ಹೌಸ್ ನಿವಾಸಿಗಳಾದ ಮಹಮ್ ರಹೀಜ್ (16) ಮತ್ತು ಮಹಮದ್ ನಿಹಾಲ್ (16) ಎಂದು ಗುರುತಿಸಲಾಗಿದೆ.
ಬಾಲಕರು ಸುಂಟಿಕೊಪ್ಪದ ಚೆನ್ನಮ್ಮ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಕಾಲೇಜು ಮುಗಿದ ನಂತರ ಸ್ನೇಹಿತರಿಬ್ಬರೂ ಸೇರಿ ಈಜಾಡಲು ಹಾರಂಗಿ ಹಿನ್ನೀರು ಹೊಳೆಗೆ ತೆರಳಿದ್ದರು. ನೀರಿನ ಆಳ ಅರಿಯದೆ ಇಬ್ಬರೂ ನೀರಿಗೆ ಇಳಿದಾಗ ಮುಳುಗಿದ್ದಾರೆ.


