ಬೆಂಗಳೂರು ಕರಗ ಮಹೋತ್ಸವ ಏಪ್ರಿಲ್ 4ರಿಂದ14 ರವರೆಗೆ ನಡೆಯಲಿದೆ. ಏಪ್ರಿಲ್ 12 ಚೈತ್ರ ಪೂರ್ಣಿಮೆಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ.
ಬೆಂಗಳೂರು ಕರಗ ಸಂಬಂಧ ನಡೆದ ಸಭೆಯಲ್ಲಿ ಕರಗ ಹೊರುವ ಪೂಜಾರಿಯಾಗಿ ಎ.ಜ್ಞಾನೇಂದ್ರ ಒಮ್ಮತದಿಂದ ಆಯ್ಕೆಯಾದರು. ಇವರು 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದಾರೆ. ಈ ವರ್ಷ ಅವರು ಕೊನೆಯ ಬಾರಿ ಕರಗ ಹೊರಲಿದ್ದಾರೆ.
ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ಸ್ವರ್ಗಾರೋಹಣ ಮಾಡುವಾಗ ದ್ರೌಪದಿ ಮೂರ್ಛೆ ತಪ್ಪಿ ಬಿದ್ದಿದ್ದಳಂತೆ. ಇದನ್ನು ತಿಳಿಯದೆ ಪಾಂಡವರು ಮುಂದೆ ಸಾಗಿದ್ದರು. ದ್ರೌಪದಿ ಎಚ್ಚರವಾಗಿ ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ತಿಮಿರಾಸುರನನ್ನು ನೋಡಿದ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾಳೆ.
ರಾಕ್ಷಸನನ್ನು ಸದೆಬಡಿಯಲು ದ್ರೌಪದಿ ತಲೆಯಿಂದ ಯಜಮಾನ, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಯಿಂದ ಗಂಟೆ ಪೂಜಾರಿ, ಹೆಗಲಿನಿಂದ ವೀರಕುಮಾರರನ್ನು ಸೃಷ್ಟಿಸುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ತಿಮಿರಾಸುರನನ್ನು ಮಣಿಸುತ್ತಾರೆ. ಬಳಿಕ ತಾಯಿ ದ್ರೌಪದಿ ಸೃಷ್ಟಿಸಿದ ಮಕ್ಕಳನ್ನೆಲ್ಲ ಬಿಟ್ಟು ಕೈಸಾಲಕ್ಕೆ ತೆರಳುವುದನ್ನು ನೋಡಿ ಮಕ್ಕಳಿಗೆ ದುಃಖವಾಗುತ್ತದೆ. ಕೈಲಾಸಕ್ಕೆ ತೆರಳದಂತೆ ದ್ರೌಪದಿ ಬಳಿ ವೀರಕುಮಾರರು ಕತ್ತಿಯಿಂದ ಎದೆಗೆ ತಿವಿದುಕೊಳ್ಳುತ್ತಾ ಬೇಡಿಕೊಳ್ಳುತ್ತಾರೆ.ಮರುಕಗೊಂಡ ದ್ರೌಪದಿ ಪ್ರತಿ ವರ್ಷವೂ ಮೂರು ದಿನ ಭೂಮಿಗೆ ಬರುವುದಾಗಿ ಮಾತು ನೀಡಿದ್ದಳು. ಅದರಂತೆ ಆಕೆ ಭೂಮಿಗೆ ಬರುವ ಆ ಮೂರು ದಿನಗಳನ್ನೇ ಕರಗ ಮಹೋತ್ಸವವನ್ನಾಗಿ ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.