ಬೀದರ್ ಎಟಿಎಂ ದರೋಡೆ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಹಾಡುಹಗಲೇ ಬ್ಯಾಂಕ್ ದರೋಡೆ ನಡೆದಿದ್ದು, ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ.
ಮಂಗಳೂರಿನ ಉಳ್ಳಾಲ ತಾಲೂಕಿನ ಕೆಸಿ ರಸ್ತೆಯ ಕೋಟೆಕಾರ್ ಬ್ಯಾಂಕ್ ನುಗ್ಗಿದ ಮುಸುಕುಧಾರಿ 5 ಮಂದಿ ದುಷ್ಕರ್ಮಿಗಳು ಲಾಂಗ್, ಮಚ್ಚು ತೋರಿಸಿ ಬ್ಯಾಂಕ್ ನಲ್ಲಿದ್ದ 12 ಕೋಟಿ ರೂ ಮೌಲ್ಯದ ನಗದ ಹಾಗೂ ಚಿನ್ನಾಭರಣ ಹೊತ್ತು ಪರಾರಿಯಾಗಿದ್ದಾರೆ.
ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಕಾರಣ ಹೆಚ್ಚಿನ ಪೊಲೀಸರು ಅದರ ಭದ್ರತೆಗೆ ತೆರಳಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿ ಶುಕ್ರವಾರ ಮಧ್ಯಾಹ್ನ ಹಾಡಹಗಲೇ ಬ್ಯಾಂಕ್ ಗೆ ನುಗ್ಗಿದ ಖದೀಮರ ಗುಂಪು ಸುಮಾರು 12 ಕೋಟಿ ರೂ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ. ಒಟ್ಟು ಆರು ಜನರಿದ್ದ ದರೋಡೆಕೋರರ ತಂಡವು ಕೋಟೆಕಾರು ಬ್ಯಾಂಕ್ ಕೆ.ಸಿರೋಡು ಶಾಖೆಗೆ ನುಗ್ಗಿ, ಪಿಸ್ತೂಲು ಮತ್ತು ತಲವಾರು ತೋರಿಸಿ ಲೂಟಿ ಮಾಡಿ ಫಿಯಟ್… pic.twitter.com/b7hvdihYSu
— kannadaprabha (@KannadaPrabha) January 17, 2025
ನಮಾಜ್ ಸಮಯಕ್ಕಾಗಿ ಕಾದಿದ್ದ ದುಷ್ಕರ್ಮಿಗಳು
ಶುಕ್ರವಾರವಾದ್ದರಿಂದ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕೆ.ಸಿ.ರೋಡು ಜಂಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಕಾರಣ ಜನಸಂಚಾರ ವಿರಳವಾಗಿತ್ತು. ಇದೇ ಸಮಯ ನೋಡಿಕೊಂಡು ದರೋಡೆಕೋರರ ಗುಂಪು ಬ್ಯಾಂಕ್ ಗೆ ದಾಳಿ ನಡೆಸಿದೆ.
ಗ್ಯಾಂಗ್ ನಲ್ಲಿ ಆರು ಜನರಿದ್ದು, ಈ ಪೈಕಿ ಐವರು ಬ್ಯಾಂಕ್ ಗೆ ನುಗ್ಗಿದರೆ ಓರ್ವ ದುಷ್ಕರ್ಮಿ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಅವರಿಗಾಗಿ ಕಾದಿದ್ದ. ಬ್ಯಾಂಕ್ ನೊಳಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲು ಮತ್ತು ತಲವಾರು ತೋರಿಸಿ ಬ್ಯಾಂಕ್ ನಿಂದ ಸುಮಾರು 12 ಕೋಟಿ ರೂ ಮೌಲ್ಯದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಗಲಾಟೆ ಕೇಳಿ ಬ್ಯಾಂಕ್ ಗೆ ಓಡಿ ಬಂದ ವಿದ್ಯಾರ್ಥಿಗಳು ಇನ್ನು ಕೋಟೆ ಕಾರು ಬ್ಯಾಂಕ್ ಮೊದಲ ಮಹಡಿಯಲ್ಲಿತ್ತು. ಕೆಳಗೆ ಬೇಕರಿ ಒಂದಿದ್ದು, ದರೋಡೆ ಸಮಯದಲ್ಲಿ ಬೇಕರಿಯಲ್ಲಿ ಕೆಲ ವಿದ್ಯಾರ್ಥಿಗಳು ತಿಂಡಿ ತಿನ್ನುತ್ತಿದ್ದರು.
ಬ್ಯಾಂಕ್ ನಿಂದ ಕೇಳಿಬಂದ ಗಲಾಟೆ ಕೇಳಿ ವಿದ್ಯಾರ್ಥಿಗಳು ಬ್ಯಾಂಕ್ ನತ್ತ ಓಡಿದ್ದು, ಈ ವೇಳೆ ದುಷ್ಕರ್ಮಿಗಳು ಅವರಿಗೆ ಪಿಸ್ತುಲು-ತಲವಾರು ತೋರಿಸಿ ಬೆದರಿಸಿ ಓಡಿಸಿದ್ದಾರೆ. ಆಗ ಕೆಳಗೆ ಬಂದ ವಿದ್ಯಾರ್ಥಿಗಳು ಜೋರಾಗಿ ಕೂಗಿ ಸ್ಥಳೀಯರನ್ನು ಕರೆದಿದ್ದಾರೆ. ಆದರೆ ಇದಾವುದನ್ನೂ ಲೆಕ್ಕಿಸದ ದುಷ್ಕರ್ಮಿಗಳು ಹಣ-ಚಿನ್ನಾಭರಣ ಹೊತ್ತು ತಾವು ತಂದಿದ್ದ ಫಿಯಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ.
ದರೋಡೆಕೋರರ ಗ್ಯಾಂಗ್ ಮಂಗಳೂರಿನತ್ತ ಪರಾರಿಯಾಗಿದೆ ಮತ್ತು ದರೋಡೆಕೋರರು ಕನ್ನಡ ಮಾತನಾಡುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.