ಕಳೆದ ವರ್ಷದವರೆಗೆ ಅಮೆರಿಕ ನೀಡುತ್ತಿದ್ದ ನೆರವು ಈಗ ಬಂದ್ ಆಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವುದಾಗಿ ಹೇಳುತ್ತಿದ್ದ ಟ್ರಂಪ್ ಇದೀಗ ಯೋಚಿಸುತ್ತಿರುವ ದಿಕ್ಕೇ ಬದಲಾಗಿದೆ. ಉಕ್ರೇನ್‌ಗೆ ಈವರೆಗೆ ಕೊಟ್ಟಿರುವ ಮಿಲಿಟರಿ ಸಹಾಯಕ್ಕೆ ಬೆಲೆ ಕಟ್ಟುತ್ತಿದ್ದಾರೆ. ಇದು ದೊಡ್ಡಣ್ಣ ಅಮೆರಿಕದ ನಿಜವಾದ ಬಣ್ಣ ಎಂದು ಎನ್ನಬಹುದೆ?
ಕಳೆದ ಮೂರು ವರ್ಷಗಳಿಂದ ಬಲಾಢ್ಯ ರಷ್ಯಾದ ವಿರುದ್ಧ ಸಾವಿರಾರು ಯೋಧರನ್ನು, ಭೂಪ್ರದೇಶ ಕಳೆದುಕೊಂಡರೂ ರಣರಂಗದಲ್ಲಿ ವೀರೋಚಿತವಾಗಿ ಯುದ್ಧ ಮಾಡುತ್ತಿದ್ದ ಉಕ್ರೇನ್ ಈಗ ಅಕ್ಷರಶಃ ಒಬ್ಬಂಟಿಯಾಗಿಬಿಟ್ಟಿದೆ. ಕಾರಣ ಅಮೆರಿಕ ಉಕ್ರೇನ್‌ಗೆ ತಾನು ನೀಡುತ್ತಿದ್ದ ನೆರವು ಸ್ಥಗಿತಗೊಳಿಸಿ ಅಸಹಾಯಕ ಸ್ಥಿತಿಗೆ ದೂಡಿದೆ. ಆ ದೇಶದ ಖನಿಜ ಸಂಪತ್ತಿನ ಮೇಲೆ ಕಣ್ಣು ಹಾಕಿದೆ. ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ನಡೆಯುತ್ತಿರುವ ಘೋರ ಯುದ್ಧವಾದ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ಯುದ್ಧ ಜಗತ್ತಿಗೆ ಕಂಟಕವಾಗಿ ಪರಿಣಮಿಸಿದೆ. ಹಣದುಬ್ಬರ, ಬೆಲೆಯೇರಿಕೆಯಿಂದ ತತ್ತರಿಸುವಂತೆ ಮಾಡಿದೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನ್ಯಾಟೋ) ಸೇರುವ ಉಕ್ರೇನ್ ದೇಶದ ನಿರ್ಧಾರದ ವಿರುದ್ದ ಫೆಬ್ರವರಿ ೨೪, ೨೦೨೨ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಗಡಿಯೊಳಗೆ ತಮ್ಮ ಸೈನಿಕರನ್ನು ನುಗ್ಗಿಸಿ, ರಷ್ಯಾ-ಉಕ್ರೇನ್ ಯುದ್ಧಕ್ಕೆ ನಾಂದಿ ಹಾಡಿದ್ದರು. ಕಳೆದ ಮೂರು ವರ್ಷಗಳ ಸುದೀರ್ಘ ಯುದ್ಧದಲ್ಲಿ ಇದುವರೆಗೂ ಸುಮಾರು ೪೩,೦೦೦ ಉಕ್ರೇನಿಯನ್ ಸೈನಿಕರು ಮತ್ತು ೧,೯೮,೦೦೦ ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಉಕ್ರೇನ್‌ನಲ್ಲಿ ೧೨,೫೦೦ ನಾಗರಿಕರು ಸಾವನ್ನಪ್ಪಿದ್ದಾರೆ. ಎರಡೂ ಕಡೆಯಿಂದ ಸಾವಿರಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಜೋ ಬೈಡನ್ ನೇತೃತ್ವದಲ್ಲಿ ವಾಷಿಂಗ್ಟನ್ ಉಕ್ರೇನ್ ಮತ್ತು ಝೆಲೆನ್ಸ್ಕಿಗೆ ದೃಢವಾದ ಬೆಂಬಲ, ೧೧೯ ಶತಕೋಟಿಗೂ ಹೆಚ್ಚಿನ ಮಿಲಿಟರಿ, ಹಣಕಾಸು ಮತ್ತು ಮಾನವೀಯ ನೆರವು ನೀಡುತ್ತಾ ಬಂದಿತ್ತು. ಅದರೆ, ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ನಂತರ ಉಕ್ರೇನ್‌ಗೆ ಬೆಂಬಲ ಸ್ಥಗಿತಗೊಳಿಸಿ ಅನಿಶ್ಚಿತತೆಗೆ ತಳ್ಳಲಾಗಿದೆ.
ರಷ್ಯಾದೊಂದಿಗೆ ರಾಜತಾಂತ್ರಿಕತೆ ಮತ್ತು ಆರ್ಥಿಕ ಸಹಕಾರ ಪುನರಾರಂಭಿಸುವ ಮೂಲಕ ಯುದ್ಧ ಕೊನೆಗೊಳಿಸುವ ಕಡೆಗೆ ತನ್ನ ಯುದ್ಧೋಚಿತ ವಿಧಾನವನ್ನು ಬಳಸುವ ಕಡೆಗೆ ಗಮನ ಹರಿಸಿದರಿಂದ ಉಕ್ರೇನ್ ಒಂಟಿಯಾದರೆ ಇದು ಯುರೋಪಿಯನ್ ಮಿತ್ರರಾಷ್ಟ್ರಗಳ ಆಘಾತ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಉಕ್ರೇನ್-ರಷ್ಯಾ ನಡುವೆ ೨೦೧೪ರಿಂದಲೂ ಸಂಬಂಧ ಹಳಸಿದೆ. ದೇಶದ ಭದ್ರತೆಗೆ ನ್ಯಾಟೋ ಸದಸ್ಯತ್ವ ಅಗತ್ಯ ಎಂಬ ಝೆಲೆನ್ಸ್ಕಿ ಬೇಡಿಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೆರಳಿಸಿತು. ನ್ಯಾಟೊ ವಿರೋಧಿಯಾದ ರಷ್ಯಾ ತನ್ನ ಗಡಿಯಲ್ಲಿ ಅದರ ವಿಸ್ತರಣೆ ಬಯಸದೆ ೨೦೨೨ರ ಫೆಬ್ರವರಿ ೨೪ರಂದು ಉಕ್ರೇನ್ ಮೇಲೆ ಯುದ್ಧ ಘೋಷಿಸಿತ್ತು.
ಉಕ್ರೇನ್ ಕೆಲವೇ ದಿನಗಳಲ್ಲಿ ಶರಣಾಗಲಿದೆ ಎಂದು ಅಧ್ಯಕ್ಷ ಪುಟಿನ್ ಭಾವಿಸಿದ್ದರು. ಆದರೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನೆರವಿನಿಂದ ಉಕ್ರೇನ್ ಕಳೆದ ನಾಲ್ಕು ವರ್ಷಗಳಿಂದ ರಷ್ಯಾ ವಿರುದ್ಧ ಸೆಣಸಾಡುತ್ತಿದೆ. ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್ ಸರ್ಕಾರ ಶಸ್ತ್ರಾಸ್ತ್ರಗಳ ಸಹಾಯ ನೀಡಿತ್ತು. ಆದಾಗ್ಯೂ, ರಷ್ಯಾವು ಅನೇಕ ಉಕ್ರೇನಿಯನ್ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರೀಕ್ಷಿಸಿದಷ್ಟು ತ್ವರಿತ ಗೆಲುವು ಪಡೆಯದಿದ್ದರೂ, ಉಕ್ರೇನಿಯನ್ ನಾಯಕ ಝೆಲೆನ್ಸ್ಕಿ ಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡುತ್ತಿದೆ. ರಷ್ಯಾದ ಕುರ್ಸ್ಕ್ ಪ್ರದೇಶದಲ್ಲಿ ಅಲ್ಪಾವಧಿಯ ಆಕ್ರಮಣದ ಹೊರತು, ರಷ್ಯಾದ ಸೈನ್ಯವನ್ನು ತನ್ನ ಪ್ರದೇಶದಿಂದ ಹಿಮ್ಮೆಟ್ಟಿಸಲು ಉಕ್ರೇನಿಯನ್ ಪಡೆಗಳಿಗೆ ಸಾಧ್ಯವಾಗಿಲ್ಲ. ಇನ್ನೊಂದೆಡೆ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ಶಾಂತಿ ಮಾತುಕತೆ ಗಾಗಿ ಅಮೆರಿಕ ರಷ್ಯಾದೊಂದಿಗೆ ಉಕ್ರೇನ್‌ನ ಹೊರತಾಗಿ ಮುಂದಾಗಿರುವುದು, ಉಕ್ರೇನಿಯನ್ ಪಡೆಗಳಿಗೆ ದೊಡ್ಡ ಹಿನ್ನಡೆಯೇ ಸರಿ. ಇನ್ನು ಅಮೆರಿಕದೊಂದಿಗೆ ಮಾತುಕತೆಯ ನಂತರ ಝೆಲೆನ್ಸ್ಕಿ ಅತೃಪ್ತಿ ವ್ಯಕ್ತಪಡಿಸಿದಾಗ ವಿಷಯಗಳು ಉಲ್ಭಣಗೊಂಡವು. ಇದರ ನಂತರ, ಟ್ರಂಪ್ ಝೆಲೆನ್ಸ್ಕಿಯನ್ನು ಚುನಾವಣೆಗಳಿಲ್ಲದ ಸರ್ವಾಧಿಕಾರಿ ಎಂದು ಕರೆದು, ಯುದ್ಧವನ್ನು ಪ್ರಾರಂಭಿಸಿದ್ದಕ್ಕಾಗಿ ಉಕ್ರೇನ್ ಅನ್ನು ದೂಷಿಸಿದರು. ಇನ್ನೊಂದೆಡೆ, ರಷ್ಯಾ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳಿ ಗಾಗಿ ಪರದಾಡುತ್ತಿದೆ ಎಂದು ಉಕ್ರೇನ್ ಹೇಳುತ್ತಿದೆ. ಆದರೆ, ಅಮೆರಿಕದ ಪ್ರಮುಖ ಎದುರಾಳಿಗಳಾದ ಚೀನಾ, ಉತ್ತರ ಕೊರಿಯಾ ಮತ್ತು ಇರಾನ್ ಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮಾಸ್ಕೋ ಇದರ ಬರ ನೀಗಿಸುವ ಪ್ರಯತ್ನ ಮಾಡಿದೆ. ಇದೇ ವೇಳೆ, ರಷ್ಯಾದ ಯುದ್ಧಕ್ಕೆ ಸೈನ್ಯವನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಅವರು ಪೂರೈಸುತ್ತಿರುವುದು ದೊಡ್ಡ ಬಲವೇ ಆಗಿದೆ.
ಖನಿಜ ಒಪ್ಪಂದ ಆಟ
ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಯುದ್ಧದಲ್ಲಿ ಅಮೆರಿಕದ ಭದ್ರತಾ ನೆರವು ಮುಂದುವರಿಯಬೇಕಾದರೆ, ಉಕ್ರೇನ್‌ನಲ್ಲಿ ಲಭ್ಯವಿರುವ ಅಪರೂಪದ ಖನಿಜ ಹಾಗೂ ಲೋಹಗಳಾದ ಟೈಟಾನಿಯಂ, ಗುಲಿಯಂಗೆ ಬೇಡಿಕೆ ಇಡಲಾಯಿತು. ಸದ್ಯ ಇಂಥ ಅಪರೂಪದ ಲೋಹಗಳು ಚೀನಾ ಬಳಿ ಇದ್ದು, ಅದು ಜಗತ್ತಿನ ಪೂರಕ ಸರಪಳಿ ನಿರ್ವಹಿಸುತ್ತಿದೆ. ಬೀಜಿಂಗ್‌ನ ಈ ಹಿಡಿತ ತಪ್ಪಿಸಲು ಟ್ರಂಪ್ ಸರ್ಕಾರ ಮುಂದಡಿ ಇಟ್ಟಿದೆ. ಉಕ್ರೇನ್‌ಗೆ ಅಮೆರಿಕ ಮಿಲಿಟರಿ ಸಹಾಯ ಮಾಡಿದೆ. ಈವರೆಗೂ ಕೊಟ್ಟಿದ್ದು ಸಾಲವಲ್ಲ, ಅನುದಾನ. ಇದಕ್ಕೆ ಪ್ರತಿಯಾಗಿ ನಮ್ಮ ದೇಶದಲ್ಲಿ ಖನಿಜ ಸಂಪತ್ತನ್ನು ಯಾಚಿಸುತ್ತಿದೆ. ಯುದ್ಧ ನಿಲುಗಡೆ ಬಳಿಕ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳೋಣ. ಅದಕ್ಕೂ ತುರ್ತಾಗಿ ಮೊದಲು ಯುದ್ಧ ಕೊನೆಗಾಣಬೇಕು ಎಂದು ಉಕ್ರೇನ್ ಅಧ್ಯಕ್ಷ ತಿರುಗೇಟು ನೀಡಿದ್ದಾರೆ. ನಾನು ಶಾಶ್ವತವಾಗಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಬಯಸುವುದಿಲ್ಲ. ನ್ಯಾಟೋದಲ್ಲಿ ಉಕ್ರೇನ್‌ಗೆ ಸ್ಥಾನ ನೀಡಿದರೆ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಾನು ಸಿದ್ಧ ಎಂದು ಹೇಳಿzರೆ.
ನನಗೆ ಅಧಿಕಾರವಲ್ಲ, ಉಕ್ರೇನ್‌ನ ಭದ್ರತೆ ಪ್ರಮುಖ ವಿಷಯ. ಮೊದಲು ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ. ದೇಶದಲ್ಲಿ ಶಾಂತಿ ಮರಳಿದರೆ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ಇದರ ಬದಲಿಗೆ, ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡಬೇಕು ಎಂದು ಅವರು ಬೇಡಿಕೆ ಇಟ್ಟರು. ಯುದ್ಧ ಕೊನೆಗೊಳ್ಳಲು ಅಮೆರಿಕ ಮಧ್ಯಸ್ಥಿಕೆ ವಹಿಸಲಿ. ಆದರೆ, ಉಕ್ರೇನಿಯನ್ ನಾಗರಿಕರಿಗೆ ನಷ್ಟ ಉಂಟುಮಾಡುವ ಭದ್ರತಾ ಒಪ್ಪಂದ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶ್ವಸಂಸ್ಥೆ ನಿರ್ಣಯ ಅಂಗೀಕಾರ
ಇದರ ಮಧ್ಯೆ ವಿಶ್ವಸಂಸ್ಥೆಯು ರಷ್ಯಾ ನಡೆಸುತ್ತಿರುವ ಯುದ್ಧದ ವಿರುದ್ಧ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಾಗರಿಕ ಸಮಾಜ ಒಳಗೊಂಡಂತೆ ಅಗಾಧವಾದ ವಿನಾಶ ಮತ್ತು ಮಾನವ ಸಂಕಟದಿಂದ ಗುರುತಿಸಲ್ಪಟ್ಟಿರುವ ಉಕ್ರೇನ್ ವಿರುದ್ಧದ ಯುದ್ಧದ ನಿಲುಗಡೆ ಮತ್ತು ಶಾಂತಿ ಕಾಪಾಡಬೇಕು ಎಂಬ ನಿರ್ಣ ಯಕ್ಕೆ ಕರೆ ನೀಡಿತು. ಮೂರು ವರ್ಷಗಳ ಹಿಂದೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಉಕ್ರೇನ್‌ನ ಕರಡು ನಿರ್ಣಯ ತಡೆಯುವ ಪ್ರಯತ್ನದಲ್ಲಿ ಅಮೆರಿಕ ರಷ್ಯನ್‌ರೊಂದಿಗೆ ಮತ ಚಲಾಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿತು. ಕರಡು ನಿರ್ಣಯದ ಪರವಾಗಿ ಯುರೋಪಿಯನ್ನರು ಮತ್ತು ಎ೭ (ಅಮೆರಿಕ ಹೊರತುಪಡಿಸಿ) ರಾಷ್ಟ್ರಗಳು ಮತ ಚಲಾಯಿಸುವುದರೊಂದಿಗೆ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸ ಲಾಯಿತು.
ನಿರ್ಣಯದ ಪರ- ವಿರೋಧ ಮತದಾನ
ಜರ್ಮನಿ, ಫ್ರಾನ್ಸ್ ಮತ್ತು ಎ೭ನಂತಹ ಪ್ರಮುಖ ಯುರೋಪ್ ರಾಷ್ಟ್ರಗಳು ಸೇರಿದಂತೆ ೯೩ ದೇಶಗಳು ಪರವಾಗಿ ಮತ ಹಾಕಿದವು. ರಷ್ಯಾ, ಇಸ್ರೇಲ್ ಮತ್ತು ಹಂಗೇರಿ ಸೇರಿ ೧೮ ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದವು. ಉಕ್ರೇನ್ ವಿರುದ್ಧ ರಷ್ಯಾದ ಜೊತೆ ಅಮೆರಿಕ ನಿಂತು ಮತ ಚಲಾಯಿಸಿದ್ದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತು. ಅಮೆರಿಕದಲ್ಲಿ ಬೈಡನ್ ಆಡಳಿತ ಕೊನೆಗೊಂಡು, ಟ್ರಂಪ್ ಯುಗ ಶುರುವಾದಾಗಿನಿಂದ ಉಕ್ರೇನ್ ನಿಲುವನ್ನು ವಿರೋಧಿಸಲಾಗುತ್ತಿದೆ.
ಇನ್ನು ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ ೬೫ ರಾಷ್ಟ್ರಗಳು ಗೈರಾಗಿದ್ದವು. ಯುದ್ಧ ಭುಗಿಲೆದ್ದ ಆರಂಭದಿಂದಲೇ ರಷ್ಯಾದ ಅತ್ಯಂತ ನಿಕಟ ಮಿತ್ರ ರಾಷ್ಟ್ರ ಗಳಲ್ಲಿ ಪ್ರಮುಖವಾಗಿರುವ ಭಾರತ ಮತ್ತು ಚೀನಾ ಇಂತಹ ನಿರ್ಣಯಗಳಿಂದ ದೂರವಿದ್ದವು.
ಮೂರು ವರ್ಷಗಳ ಹಿಂದೆ ಅಂದರೆ ೨೦೨೨ ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಿನಿಂದಲೂ ಅಮೆರಿಕ ಮತ್ತು ಪಶ್ಚಿಮ ದೇಶಗಳು ಉಕ್ರೇನ್‌ಗೆ ಆರ್ಥಿಕ, ಮಿಲಿಟರಿ ಮತ್ತು ರಾಜತಾಂತ್ರಿಕ ಬೆಂಬಲ ನೀಡಿವೆ. ಈ ನಡುವೆ ಎರಡು ರಾಷ್ಟ್ರಗಳಿಗೆ ಬೆಂಬಲ ನೀಡದೆ ತನ್ನ ಬೆಂಬಲ ಏನಿದ್ದರೂ ಸಹ ಶಾಂತಿ ಸ್ಥಾಪನೆಗೆ ಮಾತ್ರ ಎನ್ನುತ್ತಾ, ಎರಡೂ ರಾಷ್ಟ್ರಗಳೊಂದಿಗೂ ಉತ್ತಮ ಸಂಬಂಧ ಕಾಪಾಡಿಕೊಂಡ ಭಾರತ ತಟಸ್ಥವಾಗಿಲ್ಲ. ಖಂಡಿತವಾಗಿಯೂ ಭಾರತ ನಿಲುವು ತೆಗೆದು ಕೊಂಡಿದೆ. ನಾವು ರಷ್ಯಾ ಅಥವಾ ಉಕ್ರೇನ್ ಪರ ಅಲ್ಲ, ಬದಲಿಗೆ ಶಾಂತಿಯ ಪರ ನಿಂತಿದೆ. ನೇರವಾಗಿ ರಷ್ಯಾ ಅಧ್ಯಕ್ಷಪುಟಿನ್‌ಗೆ ಎಲ್ಲರ ಸಮ್ಮುಖದಲ್ಲಿಯೇ ಇದು ಯುದ್ಧದ ಯುಗವಲ್ಲ. ಮಾತುಕತೆಯ ಸಮಯ ಎಂದು ಹೇಳಿತ್ತು.
ಯುರೋಪಿಯನ್ ದೇಶಗಳ ಅಸಹಾಯಕತೆ
ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಮತ್ತು ಆನಂತರ ರಷ್ಯಾದಿಂದ ಆಮದಾಗುತ್ತಿದ್ದ, ತೈಲ ಮತ್ತು ಅನಿಲ ಪೂರೈಕೆ ನಿಂತ ನಂತರ ಯೂರೋಪಿನ ದೇಶಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿವೆ. ಸಂಕಷ್ಟದ ಮಧ್ಯೆಯೂ ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳು ಉಕ್ರೇನ್ ಪರ ನಿಂತು ನೆರವಾಗುತ್ತಿವೆ. ಯುದ್ಧ ಆರಂಭ ವಾದ ಮೇಲೆ ಲಕ್ಷಾಂತರ ಉಕ್ರೇನ್ ಜನರಿಗೆ ಯೂರೋಪ್ ಆಶ್ರಯ ನೀಡಿದೆ. ಜರ್ಮನಿಯೊಂದೇ ಸುಮಾರು ನೂರು ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಶಸಾಸ್ತ್ರಗಳನ್ನು ಪೂರೈಸಿದೆ.
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಎಲ್ಲವೂ ತಿರುಗುಮುರುಗಾಗಿದೆ. ಪ್ರಜಾತಂತ್ರದ ದೇಶವೊಂದು ಸರ್ವಾಧಿಕಾರವಿರುವ ದೇಶದ ಜೊತೆ ಹೊಂದಾಣಿಕೆ ಮಾಡಿಕೊಂಡ ವಿಚಿತ್ರ ಬೆಳವಣಿಗೆ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಆಗಿದೆ. ಶೀತಲ ಸಮರಕಾಲದಿಂದಲೂ ಸೋವಿಯತ್ ಒಕ್ಕೂಟ (ಈಗ ರಷ್ಯಾ) ಅಮೆರಿಕ ಶತ್ರು ದೇಶಗಳು. ಆದರೆ ಹಠಾತ್ತನೆ ಟ್ರಂಪ್ ರಷ್ಯಾದ ಅಧ್ಯಕ್ಷಪುಟಿನ್ ಜೊತೆ ಸ್ನೇಹ ಬೆಳಸಿ ವ್ಯಾಪಾರ ಕುದುರಿಸಲು ಯೋಚಿಸುತ್ತಿದ್ದಾರೆ.
ಈ ಸಮಯದಲ್ಲಿ ಯೂರೋಪ್ ಪ್ರತಿನಿಧಿ ಸೇರಿಸಿಕೊಳ್ಳದೇ ಅಮೆರಿಕದ ನೇತೃತದಲ್ಲಿ ಸೌದಿ ಅರೇಬಿಯಾದಲ್ಲಿ ಉಕ್ರೇನ್ ಕುರಿತು ಮಾತುಕತೆ ನಡೆಸಲಾಯಿತು. ಉಕ್ರೇನ್ ಪ್ರತಿನಿಧಿಯೂ ಆ ಮಾತುಕತೆಯಲ್ಲಿ ಇರಲಿಲ್ಲ. ಇದು ಸಹಜವಾಗಿ ಉಕ್ರೇನ್ ಅಷ್ಟೇ ಅಲ್ಲ ಯೂರೋಪ್ ದೇಶದ ನಾಯಕರನ್ನೂ ಕೆರಳಿಸಿದೆ. ಇಷ್ಟಾದರೂ ಮಾತುಕತೆಯಲ್ಲಿ ಯೂರೋಪ್ ಪ್ರಾತಿನಿಧ್ಯ ಇಲ್ಲದಿರುವುದು ಸಹಜವಾಗಿ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ, ಕಳೆದ ವರ್ಷದವರೆಗೆ ಅಮೆರಿಕ ನೀಡುತ್ತಿದ್ದ ನೆರವು ಈಗ ಬಂದ್ ಆಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವುದಾಗಿ ಹೇಳುತ್ತಿದ್ದ ಟ್ರಂಪ್ ಇದೀಗ ಯೋಚಿಸುತ್ತಿರುವ ದಿಕ್ಕೇ ಬದ ಲಾಗಿದೆ. ಉಕ್ರೇನ್‌ಗೆ ಈವರೆಗೆ ಕೊಟ್ಟಿರುವ ಮಿಲಿಟರಿ ಸಹಾಯಕ್ಕೆ ಬೆಲೆ ಕಟ್ಟುತ್ತಿzರೆ. ಇದು ದೊಡ್ಡಣ್ಣ ಅಮೆರಿಕದ ನಿಜವಾದ ಬಣ್ಣ ಎಂದು ಎನ್ನಬಹುದೆ?
– ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕ, ಪತ್ರಕರ್ತ