ಬೆಂಗಳೂರು: ಕರ್ನಾಟಕ ರಾಜ್ಯದ ಬೀಜ ನಿಗಮದ ವತಿಯಿಂದ 2025-26ನೇ ಸಾಲಿಗೆ 6 ಲಕ್ಷ ಕ್ವಿಂಟಾಲ್ ಬೀಜೋತ್ಪಾದನೆ ಗುರಿ ಇರಿಸಿ ಅದರ ಸಾಧನೆಗೆ ಸಿದ್ದತೆ ನಡೆಸುವಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.
ವಿಕಾಸ ಸೌಧದ ತಮ್ಮ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೀಜೋತ್ಪಾದನೆ, ಗುರಿಸಾಧನೆಗೆ ಜೊತೆಗೆ ಸುಧಾರಿತ ಸೇವಾ ಸೌಲಭ್ಯವನ್ನು ಒದಗಿಸಿ ಎಂದು ನಿರ್ದೇಶನ ನೀಡಿದರು.
ಕೃಷಿ ಅಭ್ಯುದಯದ ಆಶಯದೊಂದಿಗೆ ರಚನೆಗೊಂಡಿರುವ ಕರ್ನಾಟಕ ರಾಜ್ಯ ಬೀಜ ನಿಗಮವು ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಪರಿಣಾಮಕಾರಿ ಪರಿವರ್ತನೆಗಳೊಂದಿಗೆ ರೈತರಿಗೆ ಇನ್ನಷ್ಟು ಗುಣಾತ್ಮಕ ಸೇವೆ ಒದಗಿಸಬೇಕು ಎಂದರು.
ನಿಗಮದಿಂದ ರೈತರಿಗೆ, ಹಾಗೂ ಷೇರುದಾರರಿಗೆ 4.30 ಕೋಟಿ ರೂ ಲಾಭಂಶ ವಿತರಣೆ ಮಾಡಿರುವುದು ಅಭಿನಂದನೀಯ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.
ನಿಗಮವು 2024-25ನೇ ಸಾಲಿನಲ್ಲಿ 4.30 ಲಕ್ಷ ಕ್ವಿಂಟಾಲ್ ಬೀಜೋತ್ಪಾದನೆ ಗುರಿ ಹೊಂದಿದ್ದು, ಈ ತನಕ 0.75 ಲಕ್ಷ ಕ್ವಿಂಟಾಲ್ ದಾಸ್ತಾನು ಸ್ವೀಕರಿಸಲಾಗಿದೆ. ಉಳಿಕೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಹೇಳಿದರು.
ರಸಗೊಬ್ಬರ ಕಾಪು ದಾಸ್ತಾನು ಯೋಜನೆಯಡಿ 2024-25ನೇ ಸಾಲಿನಲ್ಲಿ 1.18 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪಡೆದು 1.10 ಲಕ್ಷ ಮೆಟ್ರಿಕ್ ಟನ್ ವಿತರಿಸಿದ್ದು, ಬಾಕಿ 0.8 ಲಕ್ಷ ಮೆಟ್ರಿಕ್ ಟನ್ ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದರು.
ICRISAT ಹೈದರಾಬಾದ್‌ನೊಂದಿಗೆ ಹೊಸತಳಿ ಅಳವಡಿಕೆ ಬಗ್ಗೆ MoU ಮಾಡಿಕೊಂಡಿದ್ದು, ಇದುವರೆಗಿನ ಪ್ರಗತಿ ಏನು? ಯಾವ ತಳಿ ಅಳವಡಿಸಲಾಗಿದೆ? ರೈತರಿಗೆ ಆಗಿರುವ ಪ್ರಯೋಜನವೇನು? ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು ನಿಗಮದ ಕಾರ್ಯ ಚಟುವಟಿಕೆಗಳು ರೈತರ ಹೊಲಗಳಲ್ಲಿ ರಚನಾತ್ಮಕ ಪರಿಣಾಮ ಬೀರುವುದನ್ನು ಖಾತರಿ ಪಡಿಸಿಕೊಳ್ಳುವಂತೆ ನರ್ದೇಶನ ನೀಡಿದರು.
N.F.S.M ಯೋಜನೆಯಡಿ 2023-24 ಮತ್ತು 2024-25ನೇ ಸಾಲಿನಲ್ಲಿ ಉತ್ಪಾದಿಸಿದ ನ್ಯೂಟ್ರಿಸಿರಿಯಲ್ಸ್ ಮತ್ತು ದ್ವೀದಳ ಧಾನ್ಯ ಪ್ರಮಾಣಿತ ಬೀಜಗಳಿಗೆ ಒಟ್ಟಾರೆ ರೂ.10.38 ಕೋಟಿ ಪ್ರೋತ್ಸಾಹಧನ ಪಡೆಯಲಾಗಿದ್ದು,
ಆದಷ್ಟು ಬೇಗ ಪೂರ್ಣಗೊಳಿಸುವಂತೆ ತಿಳಿಸಿದರು.
2025-26ನೇ ಸಾಲಿನಲ್ಲಿ ರೈತರಿಗೆ ನಿಯಮಿತವಾಗಿ ಬಿತ್ತನೆ ಬೀಜ ಪೂರೈಸುವಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಇದೇ ವೇಳೆ ಕೃಷಿ ಇಲಾಖೆ ಕಾರ್ಯದರ್ಶಿ ಡಾ.ರವಿಶಂಕರ್, ಆಯುಕ್ತ ವೈ.ಎಸ್.ಪಾಟೀಲ್, ಕರ್ನಾಟಕ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು .